ಸಾರಾಂಶ
ಸಾಮಾಜಿಕ ನ್ಯಾಯಕ್ಕಾಗಿ ಜಾತಿಗಣತಿ ಅಗತ್ಯ: ಕಾಂಗ್ರೆಸ್ ನವದೆಹಲಿ: ಸಾಮಾಜಿಕ ನ್ಯಾಯವನ್ನು ಕಲ್ಪಿಸಲು ಜಾತಿ ಗಣತಿಯಿಂದ ಮಾತ್ರ ಸಾಧ್ಯ ಎಂದು ಹೇಳಿರುವ ಕಾಂಗ್ರೆಸ್, ಕರ್ನಾಟಕ ಮತ್ತು ಬಿಹಾರ ರಾಜ್ಯಗಳ ರೀತಿ ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಕೇಂದ್ರ ಸರ್ಕಾರವನ್ನು ಸೋಮವಾರ ಒತ್ತಾಯಿಸಿದೆ.
ಬಿಹಾರ ಜಾತಿಗಣತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ, ಸಾಮಾಜಿಕ ನ್ಯಾಯ ಒದಗಿಸಲು, ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಜಾತಿ ಗಣತಿ ಸಹಾಯ ಒದಗಿಸಲಿದೆ ಎಂದು ಹೇಳಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಬಿಹಾರದ ಜಾತಿ ಗಣತಿಯಿಂದ ರಾಜ್ಯದಲ್ಲಿರುವ ಶೇ.84ರಷ್ಟು ಮಂದಿ ಹಿಂದುಳಿದ ವರ್ಗ, ಪ.ಜಾತಿ ಮತ್ತು ಪಂಗಡಕ್ಕೆ ಸೇರಿದವರು ಎಂಬುದು ತಿಳಿದುಬಂದಿದೆ.
ಇದೀಗ ಅವರ ಪ್ರಮಾಣದ ಆಧಾರದಲ್ಲಿ ಅವರ ಪಾಲನ್ನು ನೀಡಬಹುದಾಗಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಒಬಿಸಿಗಳಾಗಿದ್ದಾರೆ. ಇವರು ಭಾರತದ ಬಜೆಟ್‌ನ ಶೇ.5ರಷ್ಟನ್ನು ಮಾತ್ರ ನಿರ್ವಹಣೆ ಮಾಡುತ್ತಿದ್ದಾರೆ.
ಹೀಗಾಗಿ ದೇಶದ ಜಾತಿ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ’ ಎಂದು ಹೇಳಿದ್ದಾರೆ. ‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾತಿ ಗಣತಿಯನ್ನು ನಡೆಸಿತ್ತು. ಆದರೆ ಮೋದಿ ಅವರ ಸರ್ಕಾರ ಅದನ್ನು ಬಿಡುಗಡೆ ಮಾಡಲಿಲ್ಲ.
ಬಿಹಾರ ಇದೀಗ ತಾನು ನಡೆಸಿದ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದೆ. ಈ ಮೊದಲು ಕರ್ನಾಟಕದಲ್ಲೂ ಜಾತಿ ಗಣತಿ ನಡೆಸಲಾಗಿತ್ತು. ಇದೇ ರೀತಿ ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.