ಚಿರ ಯೌವನಕ್ಕೆ ಚಿಕಿತ್ಸೆ ಪಡೀತಿದ್ದ ನಟಿ ಶೆಫಾಲಿ ನಿಧನ

| N/A | Published : Jun 29 2025, 01:32 AM IST / Updated: Jun 29 2025, 05:15 AM IST

ಸಾರಾಂಶ

ಕನ್ನಡದ ‘ಹುಡುಗರು’ ಚಿತ್ರ ಸೇರಿದಂತೆ ವಿವಿಧ ಭಾಷೆಯಲ್ಲಿ ಅಭಿನಯಿಸಿದ್ದ ನಟಿ ಶೆಫಾಲಿ ಜರಿವಾಲಾ (42) ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ.

ಮುಂಬೈ: ಕನ್ನಡದ ‘ಹುಡುಗರು’ ಚಿತ್ರ ಸೇರಿದಂತೆ ವಿವಿಧ ಭಾಷೆಯಲ್ಲಿ ಅಭಿನಯಿಸಿದ್ದ ನಟಿ ಶೆಫಾಲಿ ಜರಿವಾಲಾ (42) ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ. ಶೆಫಾಲಿ ಶವ ಅವರ ಮನೆಯಲ್ಲಿ ಪತ್ತೆಯಾಗಿದ್ದು, ಅವರು ಹೃದಾಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಶನಿವಾರ ಶೆಫಾಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ನಡೆಸಲಾಗಿದೆ. ಅದರ ವರದಿ ಬಹಿರಂಗಕ್ಕೆ ಪೊಲೀಸರು ನಿರಾಕರಿಸಿದ್ದಾರೆ.

ಅಂಧೇರಿಯಲ್ಲಿರುವ ನಿವಾಸದಲ್ಲಿ ಶೆಫಾಲಿ ದೇಹ ಶುಕ್ರವಾರ ರಾತ್ರಿ 1 ಗಂಟೆ ವೇಳೆಗೆ ಪತ್ತೆಯಾಗಿತ್ತು. ಕೂಡಲೆ ಅವರನ್ನು ಪತಿ ಪರಾಗ್‌ ತ್ಯಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ಅಸುನೀಗಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ನಟಿಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ‘ಶುಕ್ರವಾರ ತಡರಾತ್ರಿ ಈ ಬಗ್ಗೆ ನಮಗೆ ಮಾಹಿತಿ ಲಭಿಸಿತು. ಅವರ ಶವವನ್ನು ಪರೀಕ್ಷೆಗಾಗಿ ಕೂಪರ್‌ ಆಸ್ಪತ್ರೆಗೆ ಕಳಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆದಿದೆ. ಆದರೆ ಸಾವಿಗೆ ಕಾರಣವನ್ನು ಈಗಲೇ ಬಹಿರಂಗಪಡಿಸುವುದಿಲ್ಲ’ ಎಂದು ಹೇಳಿದ್ದಾರೆ.

ಚಿರಯೌವನಕ್ಕಾಗಿ ಚಿಕಿತ್ಸೆ:

ಶೆಫಾಲಿ ಅವರು ಸದಾ ತರುಣಿಯಾಗಿರಲಿ ಬೊಟಾಕ್ಸ್‌, ಲಿಪ್‌ ಇಂಜೆಕ್ಷನ್‌ ಚಿಕಿತ್ಸೆಗಳಿಗೆ ಒಳಗಾಗಿದ್ದು, ವಿಟಮಿನ್‌-ಸಿ ಮತ್ತು ಗ್ಲುಟಾಥಿಯೋನ್ ಸೇವಿಸುತ್ತಿದ್ದರು. ಇದರಿಂದಾಗಿ ಹೃದಯ ಸ್ತಂಭನವಾಗಿರಲೂ ಬಹುದು ಎನ್ನಲಾಗುತ್ತಿದೆ. 2002ರಲ್ಲಿ 20 ವರ್ಷದವರಾಗಿದ್ದಾಗ ‘ಕಾಂಟಾ ಲಗಾ’ ಹಾಡಿನಲ್ಲಿ ನಟಿಸಿದ್ದ ಶೆಫಾಲಿ, ರಾತ್ರೋರಾತ್ರಿ ಜನಪ್ರಿಯರಾಗಿದ್ದರು. ಬಳಿಕ ತನ್ನ ನೃತ್ಯ, ನಟನೆ, ಟೀ.ವಿ. ಕಾರ್ಯಕ್ರಮಗಳಿಂದ ಪ್ರಸಿದ್ಧರಾಗಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರ ಹುಡುಗರು ಚಿತ್ರದ ‘ಬೋರ್ಡು ಇರದ ಬಸ್ಸನು’ ಹಾಡಿಗೆ ಶೆಫಾಲಿ ಹೆಜ್ಜೆ ಹಾಕಿದ್ದಾರೆ.

Read more Articles on