ಸಾರಾಂಶ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 2,929 ಕೋಟಿ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ರಿಲಯನ್ಸ್ ಕಮ್ಯುನಿಕೇಷನ್ ಲಿ. (ಆರ್‌ಕಾಂ) ನಿರ್ದೇಶಕ ಅನಿಲ್ ಅಂಬಾನಿ ಮನೆ ಮತ್ತು ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.
ನವದೆಹಲಿ/ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 2,929 ಕೋಟಿ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ರಿಲಯನ್ಸ್ ಕಮ್ಯುನಿಕೇಷನ್ ಲಿ. (ಆರ್‌ಕಾಂ) ನಿರ್ದೇಶಕ ಅನಿಲ್ ಅಂಬಾನಿ ಮನೆ ಮತ್ತು ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸಾಕಷ್ಟು ದಾಖಲೆ ಪತ್ರ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಏನಿದು ಪ್ರಕರಣ?:
ಅನಿಲ್ ಅಂಬಾನಿ ಒಡೆದ ಆರ್‌ಕಾಂ ಕಂಪನಿ ಎಸ್‌ಬಿಐನಿಂದ 2929 ಕೋಟಿ ರು. ಸೇರಿದಂತೆ ವಿವಿಧ ಬ್ಯಾಂಕ್‌ಗಳಿಂದ ಅಂದಾಜು 40000 ಕೋಟಿ ರು. ಸಾಲ ಪಡೆದಿತ್ತು. ಸಾಲ ಪಡೆಯಲು ಅಕ್ರಮ ಮಾರ್ಗಗಳನ್ನು ಅನುಸರಿಸಲಾಗಿತ್ತು. ಜೊತೆಗೆ, ಎಸ್‌ಬಿಐನಿಂದ ಪಡೆದ ಸಾಲದ ಹಣವನ್ನು ಮೂಲ ಉದ್ದೇಶಕ್ಕೆ ಬಳಸದೇ, ಇತರೆ ಬ್ಯಾಂಕ್‌ಗಳ ಸಾಲ ತೀರಿಸಲು ಮತ್ತು ಬೇರೆ ಬೇರೆ ಉದ್ದೇಶಗಳಿಗೆ ಅಕ್ರಮವಾಗಿ ಬಳಸಿದ್ದು ಲೆಕ್ಕ ಪರಿಶೋಧನೆ ವೇಳೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಬಿಐ ದೂರು ದಾಖಲಿಸಿತ್ತು.
ಈ ಸಂಬಂಧ ಗುರುವಾರ ಕ್ರಿಮಿನಲ್ ಷಡ್ಯಂತ್ರ, ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ಆರ್‌ಕಾಂ ಕಂಪನಿ ವಿರುದ್ಧ ಈಗಾಗಲೇ ಸಾಲಗಾರರು ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಕುರಿತ ನಿರ್ಣಯಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(ಎನ್‌ಸಿಎಲ್ಟಿ) ಅನುಮತಿ ಇನ್ನಷ್ಟೇ ಸಿಗಬೇಕಿದೆ. ಇನ್ನು ಎಸ್‌ಐಬಿ ಕೂಡ ಪ್ರತ್ಯೇಕವಾಗಿ ದಿವಾಳಿ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದೆ.