17000 ಕೋಟಿ ರು. ಮೊತ್ತದ ಸಾಲದ ಹಣವನ್ನು ಬೇರೆ ಬೇರೆ ಕಡೆಗೆ ಅಕ್ರಮ ವರ್ಗಾಯಿಸಿದ ಆರೋಪದ ಪ್ರಕರಣದಲ್ಲಿ ಆ.5ರಂದು ವಿಚಾರಣೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಉದ್ಯಮಿ ಅನಿಲ್ ಅಂಬಾನಿಗೆ ಸಮನ್ಸ್‌ ಜಾರಿ ಮಾಡಿದೆ.

 ನವದೆಹಲಿ: 17000 ಕೋಟಿ ರು. ಮೊತ್ತದ ಸಾಲದ ಹಣವನ್ನು ಬೇರೆ ಬೇರೆ ಕಡೆಗೆ ಅಕ್ರಮ ವರ್ಗಾಯಿಸಿದ ಆರೋಪದ ಪ್ರಕರಣದಲ್ಲಿ ಆ.5ರಂದು ವಿಚಾರಣೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಉದ್ಯಮಿ ಅನಿಲ್ ಅಂಬಾನಿಗೆ ಸಮನ್ಸ್‌ ಜಾರಿ ಮಾಡಿದೆ. ಇದೇ ವೇಳೆ, ಅಂಬಾನಿ ವಿದೇಶಕ್ಕೆ ಹೋಗದಂತೆ ನಿರ್ಬಂಧ ವಿಧಿಸಿ ಲುಕೌಟ್‌ ನೋಟಿಸ್‌ ಜಾರಿ ಮಾಡಲಾಗಿದೆ.

ಈ ಮೂಲಕ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ರೀತಿ ದೇಶ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿದೆ.

ಅಲ್ಲದೆ, ಅವರ ಒಡೆತನದ ಹಲವು ಕಂಪನಿಗಳ ನಿರ್ದೇಶಕರಿಗೂ ಇದೇ ರೀತಿಯ ನೋಟಿಸ್‌ ನೀಡಲಾಗಿದೆ ಎನ್ನಲಾಗಿದೆ.

ಅನಿಲ್‌ ಒಡೆತನದ ಕಂಪನಿಗಳು ಬ್ಯಾಂಕ್‌ನಿಂದ ಸಾಲವಾಗಿ ಪಡೆದ ಹಣವನ್ನು ಅಕ್ರಮವಾಗಿ ಬೇರೆ ಬೇರೆ ಕಡೆ ವರ್ಗಾಯಿಸಿ ಹಣ ಲಪಟಾಯಿಸಿದ ಆರೋಪವಿದೆ. ಅಲ್ಲದೆ, ಅನುಮೋದನೆಗೂ ಮೊದಲೇ ಅವರ ಕಂಪನಿ ಖಾತೆಗೆ ಸಾಲದ ಹಣ ಜಮೆ ಆಗಿದೆ ಎನ್ನಲಾಗಿದೆ. ಈ ವಿಷಯದಲ್ಲಿ ಹೂಡಿಕೆದಾರರು, ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಯನ್ನೂ ವಂಚಿಸಿದ ಆರೋಪವಿದೆ.

ಈ ಹಿನ್ನೆಲೆಯಲ್ಲಿ ಅವರ ಒಡೆತನದ 35 ಕಂಪನಿಗಳಿಗೆ ಸೇರಿದ 35 ಸ್ಥಳಗಳ ಮೇಲೆ ಜು.24ರಂದು ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಅಕ್ರಮ ಹಣ ವರ್ಗಾವಣೆ ಆರೋಪದ ಈ ಪ್ರಕರಣದಲ್ಲಿ 3 ದಿನ ತಪಾಸಣೆ ನಡೆಸಿದ್ದ ಅಧಿಕಾರಿಗಳು ಇದೀಗ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಅನಿಲ್‌ ಅಂಬಾನಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಅನಿಲ್‌ ಒಡೆತನದ ಸಂಸ್ಥೆಗೆ ನಕಲಿ ಬ್ಯಾಂಕ್‌ ಖಾತೆ ಗ್ಯಾರಂಟಿ : ಇ.ಡಿ. ದಾಳಿ

ನವದೆಹಲಿ: ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಎನ್‌ಯು ಬಿಇಎಸ್‌ಎಸ್‌ ಲಿ ಸೇರಿದಂತೆ ಹಲವು ಕಂಪನಿಗಳ ಬ್ಯಾಂಕ್‌ ಸಾಲಕ್ಕೆ ನಕಲಿ ಬ್ಯಾಂಕ್‌ ಗ್ಯಾರಂಟಿ ನೀಡುತ್ತಿದ್ದ ಒಡಿಶಾದ ಕಂಪನಿಯೊಂದರ ಮೇಲೆ ಇ.ಡಿ. ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.ಭುವನೇಶ್ವರದಲ್ಲಿರುವ ಬಿಸ್ವಾಸ್‌ ಟ್ರೇಡ್‌ಲಿಂಕ್‌ ಹೆಸರಿನ ಕಂಪನಿಯು ವಿವಿಧ ಕಂಪನಿಗಳ ಬ್ಯಾಂಕ್‌ ಸಾಲಕ್ಕೆ ನಕಲಿ ಬ್ಯಾಂಕ್‌ ಗ್ಯಾರಂಟಿ ನೀಡುವ ದಂಧೆ ನಡೆಸುತ್ತಿತ್ತು. 

ಇದಕ್ಕೆ ಶೇ.8ರಷ್ಟು ಕಮಿಷನ್‌ ಪಡೆಯುತ್ತಿತ್ತು. ಇತ್ತೀಚೆಗೆ ಮುಂಬೈನಲ್ಲಿ ಅನಿಲ್‌ ಒಡೆತನದ ಕಂಪನಿಗಳ ಮೇಲಿನ ದಾಳಿ ವೇಳೆ ಸಿಕ್ಕ ಮಾಹಿತಿ ಅಧರಿಸಿ ಇ.ಡಿ. ಅಧಿಕಾರಿಗಳು ಶುಕ್ರವಾರ ಒಡಿಶಾದಲ್ಲಿ ದಾಳಿ ನಡೆಸಿದ್ದಾರೆ.

ಈ ನಡುವೆ ತಾನು ಕೂಡಾ ಈ ದಂಧೆಯ ಬಲಿಪಶುವಾಗಿದ್ದು, ಈ ಕುರಿತು 2024ರಲ್ಲೇ ತಾನು ಸೆಬಿ ಗಮನಕ್ಕೆ ವಿಷಯ ತಂದಿದ್ದಾಗಿ ರಿಲಯನ್ಸ್‌ ಕಂಪನಿ ಹೇಳಿದೆ.