ಸಾರಾಂಶ
ದೆಹಲಿ ಅಬಕಾರಿ ಹಗರಣದಲ್ಲಿ ಫೆ.26ಕ್ಕೆ ವಿಚಾರಣೆಗೆ ಹಾಜರಾಗಲು ಸಿಬಿಐ ಕೆಸಿಆರ್ ಪುತ್ರಿ ಕವಿತಾಗೆ ಸೂಚನೆ ನೀಡಿದೆ.
ನವದೆಹಲಿ: ದೆಹಲಿಯ ಹಿಂದಿನ ಅಬಕಾರಿ ನೀತಿ ಹಗರಣದ ತನಿಖೆಗಾಗಿ ವಿಚಾರಣೆ ಹಾಜರಾಗುವಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಶಾಸಕಿ ಕೆ. ಕವಿತಾ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
ಫೆ.26ನೇ ತಾರೀಖಿನಂದು ದೆಹಲಿಯಲ್ಲಿರುವ ಸಿಬಿಐ ಕಚೇರಿಗೆ ಹಾಜರಾಗುವಂತೆ ಕವಿತಾ ಅವರಿಗೆ ಬುಧವಾರ ಸೂಚಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿಯೇ ಕವಿತಾ ಸಿಬಿಐ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು.
ಈ ಹಿಂದೆ ದೆಹಲಿಯಲ್ಲಿ ಮದ್ಯ ಮಾರಾಟಗಾರರಿಗೆ ಪರವಾನಗಿ ನೀಡಲು ಭಾರೀ ಲಂಚ ಪಡೆದಿರುವ ಆರೋಪ ದೆಹಲಿಯ ಆಪ್ ಸರ್ಕಾರದ ಮೇಲಿದೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲ ಆಪ್ ಶಾಸಕರು ಜೈಲು ಪಾಲಾಗಿದ್ದಾರೆ. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಕವಿತಾ ಅವರ ವಿಚಾರಣೆಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.