ಅಯೋಧ್ಯೆ ರಾಮಮಂದಿರದ ದೇಣಿಗೆಯನ್ನು 105 ಬಾರಿ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿವೆ ಎಂಬ ಆಘಾತಕಾರಿ ಸಂಗತಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 ನವದೆಹಲಿ/ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ದೇಣಿಗೆಯನ್ನು 105 ಬಾರಿ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿವೆ ಎಂಬ ಆಘಾತಕಾರಿ ಸಂಗತಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಲ್ಲದೆ, ಪ್ರಕರಣದ ಚಾರ್ಜ್‌ಶೀಟನ್ನು ಸೆ.25ರೊಳಗೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಲಿದೆ.

ರಾಮಮಂದಿರದ ದೇಣಿಕೆ ಕಳವು ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಿತು. ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಸ್‌ಐಟಿ ವರದಿಯನ್ನು ಉಲ್ಲೇಖಿಸಿ ಕೋರ್ಟ್‌ಗೆ ಮಾಹಿತಿ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟೀವಿ ದೃಶ್ಯಾವಳಿಗಳು, ಸಾಕ್ಷಿಗಳ ಹೇಳಿಕೆಗಳು ಹಾಗೂ ಲಭ್ಯವಿರುವ ಎಲ್ಲಾ ತಾಂತ್ರಿಕ ಆಧಾರಗಳನ್ನು ಕೋರ್ಟ್‌ಗೆ ಸಲ್ಲಿಸಲಾಯಿತು. ಈವರೆಗೆ ಕೈಗೊಂಡಿರುವ ತನಿಖೆಯ ಸಂಪೂರ್ಣ ವಿವರವನ್ನು ಮುಖ್ಯ ನ್ಯಾ. ಸೂರ್ಯಕಾಂತ್‌, ನ್ಯಾ. ಜಯಮಾಲ್ಯ ಬಾಗ್ಚಿ ಹಾಗೂ ನ್ಯಾ. ವಿ. ಮೋಹನ ಅವರ ಪೀಠ ದಾಖಲಿಸಿಕೊಂಡಿತು.

‘ಮಂದಿರದ ಸಂಕೀರ್ಣದಲ್ಲಿ ಅಳವಡಿಸಲಾದ ಸಿಸಿಟೀವಿ ಕ್ಯಾಮೆರಾಗಳಲ್ಲಿ ಒಟ್ಟು 105 ಬಾರಿ ಕಳ್ಳತನ ನಡೆದ ದೃಶ್ಯಗಳು ಸೆರೆಯಾಗಿವೆ. ಇವುಗಳ ಹಾಗೂ ಇನ್ನಿತರ ಸಾಕ್ಷ್ಯಗಳ ಆಧಾರದ ಮೇಲೆ, ಅಕ್ರಮದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಭಕ್ತರು ನೀಡುತ್ತಿದ್ದ ಬೆಲೆಬಾಳುವ ಕಾಣಿಕೆಗಳಿಗೆ ಸಾಫ್ಟ್‌ವೇರ್‌ ಮೂಲಕ ರಶೀದಿಯನ್ನು ಜನರೇಟ್‌ ಮಾಡಿ ನೀಡಲಾಗುತ್ತಿತ್ತು. ನಂತರ ಆ ವಸ್ತುಗಳನ್ನು ಎಸ್‌ಬಿಐನ ಲಾಕರ್‌ನಲ್ಲಿ ಇಡಲಾಗುತ್ತಿತ್ತು’ ಎಂದು ವರದಿ ತಿಳಿಸಿದೆ.

ಸೆ.25ರೊಳಗೆ ಚಾರ್ಜ್‌ಶೀಟ್‌:

ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯು ಬಹುತೇಕ ಪೂರ್ಣಗೊಂಡಿದ್ದು, ಬರುವ ಸೆ.25 ಅಥವಾ ಅದರ ಒಳಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು ಎಂದೂ ಎಸ್‌ಐಟಿ ಪರವಾಗಿ ಸುಪ್ರೀಂ ಕೋರ್ಟ್‌ಗೆ ಮೆಹ್ತಾ ತಿಳಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿ ನಡೆದ ಮೊದಲ ಬಂಧನಕ್ಕೆ ಸೆ.25ರಂದು 90 ದಿನಗಳು ಮುಗಿಯುತ್ತವೆ. ಆದ್ದರಿಂದ ಅಷ್ಟರೊಳಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ, ಆರೋಪಿಗಳಿಗೆ ಸ್ವಯಂಚಾಲಿತವಾಗಿ ಜಾಮೀನು ಸಿಕ್ಕಿಬಿಡುತ್ತದೆ’ ಎಂದು ಮೆಹ್ತಾ ಸುಪ್ರೀಂಗೆ ತಿಳಿಸಿದರು. ಕಾನೂನಿನ ನಿಯಮಾವಳಿಗಳಂತೆ ಚಾರ್ಜ್‌ಶೀಟ್ ಆಧಾರದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತು.

ಸಿಇಒ ಅಧಿಕಾರ ಸ್ವೀಕಾರ:

ಈ ನಡುವೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ (ನಿವೃತ್ತ) ಸೋಮವಾರ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರು.

ತನಿಖೆಯ ಹಾದಿ

ರಾಮಮಂದಿರ ಹುಂಡಿ ಕಳವಿನ ತನಿಖೆಗೆ ಎಸ್‌ಐಟಿ ರಚಿಸಿದ್ದ ಸುಪ್ರೀಂಕೋರ್ಟ್‌

ಸೋಮವಾರದ ವಿಚಾರಣೆ ವೇಳೆ ತನಿಖೆಯ ಬೆಳವಣಿಗೆ ಕುರಿತು ಮಾಹಿತಿ ಸಲ್ಲಿಕೆ

ಅದರಲ್ಲಿ ಸಿಸಿಟೀವಿ ತಪಾಸಣೆ ವೇಳೆ 105 ಬಾರಿ ಹುಂಡಿ ಕಳ್ಳತನದ ಬಗ್ಗೆ ಪ್ರಸ್ತಾಪ

ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳು ಪತ್ತೆಯಾದ ಬಗ್ಗೆಯೂ ಉಲ್ಲೇಖ

ಸೆ.25ರೊಳಗೆ ತನಿಖಾ ವರದಿ ಸಲ್ಲಿಕೆ: ಸುಪ್ರೀಂಗೆ ಎಸ್‌ಐಟಿಯಿಂದ ಮಾಹಿತಿ