ಮತಗಳವು ವಿಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ವಾಗ್ದಾಳಿ ಮತ್ತಷ್ಟು ತೀವ್ರಗೊಳಿಸಿದ್ದಾರೆ.
ನವದೆಹಲಿ: ಮತಗಳವು ವಿಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ವಾಗ್ದಾಳಿ ಮತ್ತಷ್ಟು ತೀವ್ರಗೊಳಿಸಿದ್ದಾರೆ. ನಮ್ಮ ಪ್ರತಿಭಟನೆ ನೋಡಿ ಜ್ಞಾನೇಶ್ ಕುಮಾರ್ ಅವರಿಗೆ ರಾತ್ರಿ ನಿದ್ದೆಯೇ ಬರುತ್ತಿಲ್ಲ. ಅವರು ತಪ್ಪು ಮಾಡಿದ್ದಾರೆ, ಆದರೆ, ಅವರು ಅಪರಾಧಿ ಅಲ್ಲ. ಮತಗಳವು ವಿಚಾರದಲ್ಲಿ ಅವರು ಮಾಫಿ ಸಾಕ್ಷಿಯಾಗಲು ಮುಂದೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ್ಞಾನೇಶ್ ಕುಮಾರ್ ನಮ್ಮನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ. ಅವರು ತಪ್ಪು ಮಾಡಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ಅವರು ನೈಜ ಅಪರಾಧಿ ಅಲ್ಲ. ಜ್ಞಾನೇಶ್ ಕುಮಾರ್ ಈ ಸುದ್ದಿಗೋಷ್ಠಿ ನೋಡುತ್ತಿದ್ದಾರೆಂಬುದು ಗೊತ್ತಿದೆ. ಅವರಿಗೆ ಸಿಇಸಿ ಆಗಿ ನೀವು ಮುಂದುವರಿಯುವುದಿಲ್ಲ ಎಂದು ಈ ಮೂಲಕ ನೇರವಾಗಿ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಸಿಬಿಐ, ಜಾರಿ ನಿರ್ದೇಶನಾಲಯ, ವಿದೇಶಾಂಗ ಸಚಿವಾಲಯ ಸೇರಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು ಪ್ರತಿಪಕ್ಷದವರ ಜತೆಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ ರಾಹುಲ್ ಗಾಂಧಿ, ಅವರು ನಮಗೆ ಮಾಹಿತಿ ರವಾನಿಸುತ್ತಿದ್ದಾರೆ. ಕೇಂದ್ರ ಸರ್ಕಾರ ತಪ್ಪು ಮಾಡಿದವರನ್ನು ರಕ್ಷಿಸಲು ಯತ್ನಿಸುತ್ತಿದ್ದು, ನಾವು ಅದಕ್ಕೆ ಅವಕಾಶ ನೀಡಲ್ಲ ಎಂದರು.
ಶಿವತಾಂಡವ, ಸಿಜೆಪಿಗೆ ಸಂದೇಶ:
ಮತಗಳವು, ಮೋದಿ, ಅಮಿತ್ ಶಾ ವಿರುದ್ಧ ನಡೆಯುತ್ತಿರುವ ಎಲ್ಲಾ ಪ್ರತಿಭಟನೆಗಳೂ ಒಂದೇ ಎಂದು ಪ್ರತಿಪಾದಿಸಿದ ರಾಹುಲ್, ಇದು ಸಂವಿಧಾನ ರಕ್ಷಿಸಲು ನಡೆಯುತ್ತಿರುವ ಚಳವಳಿ. ನೀವು ಯಾವ ಸಂಘಟನೆ, ಯಾವ ಗುಂಪು ಎಂಬುದು ಮುಖ್ಯವಲ್ಲ. ಸಂವಿಧಾನ ರಕ್ಷಣೆಗೆ ನಡೆಯುವ ಯಾವುದೇ ಪ್ರತಿಭಟನೆಗೆ ಪ್ರತಿಪಕ್ಷಗಳ ಬೆಂಬಲ, ರಕ್ಷಣೆ, ನೆರವು ಸಿಗಲಿದೆ. ನಾವೂ ಕೂಡ ನಿಮ್ಮಿಂದ ಅದನ್ನೇ ಬಯಸುತ್ತೇವೆ. ದೇಶದ ಸಂವಿಧಾನ ಎತ್ತಿಹಿಡಿಯುವವರೆಗೆ ದೇಶದ ಯುವಜನರ ಹೋರಾಟ ನಿಲ್ಲಲ್ಲ. ಸಿಇಸಿ ಮನೆಗೆ ಹೋಗ್ತಾರೆ, ಚುನಾವಣಾ ವ್ಯವಸ್ಥೆ ಬದಲಾಗಲಿದೆ, ನಮಗೆ ನ್ಯಾಯ ಸಿಗಲಿದೆ ಎಂದು ತಿಳಿಸಿದರು. ಈ ಮೂಲಕ ಪರೋಕ್ಷವಾಗಿ ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ಜಿರಳೆ ಪಕ್ಷಕ್ಕೆ ಪರೋಕ್ಷ ಸಂದೇಶ ರವಾನಿಸಿದರು.
ಶಿವ ತಾಂಡವ ಹಾಗೂ ಶಿವನ ಮೆರವಣಿಗೆಗೆ ಹೋಲಿಸಿದ ರಾಹುಲ್
ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಶಿವ ತಾಂಡವ ಹಾಗೂ ಶಿವನ ಮೆರವಣಿಗೆಗೆ ಹೋಲಿಸಿದ ರಾಹುಲ್ ಗಾಂಧಿ, ಶಿವ ತಾಂಡವ ಅಥವಾ ಮೆರವಣಿಗೆಗೆ ಯಾವುದೇ ನಿಶ್ಚಿತ ಯೋಜನೆಗಳಿರುವುದಿಲ್ಲ, ಯಾರು ಬೇಕಿದ್ದರೂ ಅದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಇಂದು(ಸೋಮವಾರ) ನಾವು ಸುಪ್ರೀಂ ಕೋರ್ಟ್‌ಗೆ ತೆರಳಿ ಮನವಿ ಸಲ್ಲಿಸಲಿದ್ದೇವೆ, ನಾಳೆ ಬೇರೆ ರೀತಿಯ ಹೋರಾಟ ಮಾಡುತ್ತೇವೆ ಎಂದರು.

