ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಿರಳೆ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಜಂತರ್ ಮಂತರ್ ಪ್ರತಿಭಟನೆ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸುಪ್ರೀಂ ಕೋರ್ಟ್ ಸೂಚನೆ ಹೊರತಾಗಿಯೂ ಮತ್ತೆ 200ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಿರಳೆ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಜಂತರ್ ಮಂತರ್ ಪ್ರತಿಭಟನೆ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸುಪ್ರೀಂ ಕೋರ್ಟ್ ಸೂಚನೆ ಹೊರತಾಗಿಯೂ ಮತ್ತೆ 200ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ನಡುವೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ದೇಶಾದ್ಯಂತ ವಿಸ್ತರಿಸಲಿದೆ ಎಂದು ಸಿಜೆಪಿ ಘೋಷಿಸಿದೆ.
ದೆಹಲಿ ಪೊಲೀಸರ ಬಂಧನದಿಂದ ಬಿಡುಗಡೆಯಾದ ಬೆನ್ನಲ್ಲೇ ಸಿಜೆಪಿ ನಾಯಕರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಭಿಜಿತ್ ದೀಪ್ಕೆ ಅವರು ಕೇಂದ್ರ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಹೋರಾಟ ತೀವ್ರಗೊಳಿಸುವ ಸುಳಿವು ನೀಡಿದ್ದಾರೆ.
ಅಲ್ಲದೆ ದೆಹಲಿ ಪೊಲೀಸರು ಹೇಳಿದಂತೆ, ಮತ್ತೆ ಪ್ರತಿಭಟನೆ ನಡೆಸುವುದಿಲ್ಲ ಎಂದು ನಾವೇನೂ ಬಾಂಡ್ ಬರೆದುಕೊಟ್ಟಿಲ್ಲ. ನಾವು ಮೋದಿ ಅಥವಾ ಅಮಿತ್ ಶಾ ಬಗ್ಗೆ ಹೆದರಿಕೊಂಡಿಲ್ಲ. ನನ್ನನ್ನು 100 ಬಾರಿ ಜೈಲಿಗೆ ಹಾಕಿದರೂ ನಿಮ್ಮ ಸರ್ವಾಧಿಕೋರಿ ಧೋರಣೆ ಬಗ್ಗೆ ನಾವು ಅಂಜುವುದಿಲ್ಲ. ಈ ಸರ್ವಾಧಿಕಾರಿ ಆಡಳಿತವನ್ನು ನಾವು ಕೊನೆಗೊಳಿಸಲಿದ್ದೇವೆ ಎಂದು ಅಬ್ಬರಿಸಿದ್ದಾರೆ.
ತುರ್ತುಪರಿಸ್ಥಿತಿ:
ಮೋದಿ ಸರ್ಕಾರವು ದೇಶದಲ್ಲಿ ತುರ್ತುಪರಿಸ್ಥಿತಿ ರೀತಿಯ ವಾತಾವರಣ ನಿರ್ಮಿಸುತ್ತಿದೆ. ತನ್ನದೇ ನಾಗರಿಕರ ವಿರುದ್ಧ ದೇಶವನ್ನು ಎತ್ತಿಕಟ್ಟಿದೆ. ಗೊತ್ತುಪಡಿಸಿದ ಜಾಗದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಹತ್ತಿಕ್ಕುವ ಬದಲು ಪ್ರತಿಭಟನಾಕಾರರ ನಿಯೋಗವನ್ನು ಮಾತುಕತೆಗೆ ಆಹ್ವಾನಿಸಬಹುದಿತ್ತು ಎಂದು ಸೌರವ್ ದಾಸ್ ಹೇಳಿದ್ದಾರೆ.
ಈ ನಡುವೆ, ಈ ಪ್ರತಿಭಟನೆ ನಿಲ್ಲುವುದಿಲ್ಲ, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ದೆಹಲಿ ಮಾತ್ರವಲ್ಲ ದೇಶಾದ್ಯಂತ ಪ್ರತಿಭಟನೆ ನಿಲ್ಲಲ್ಲ ಎಂದು ಅಶುತೋಷ್ ರಾಂಕಾ ತಿಳಿಸಿದ್ದಾರೆ.
ನಿಲ್ಲದ ಪ್ರತಿಭಟನೆ:
ಶನಿವಾರ ಕರೆ ನೀಡಿದ್ದ ಪ್ರತಿಭಟನೆ ವಿಫಲವಾದರೂ ಎಸ್‌ಎಫ್‌ಐ, ಎಐಎಸ್‌ಎಫ್, ಕ್ರಾಂತಿಕಾರಿ ಯುವ ಸಂಘಟನೆ ಮತ್ತು ಸಿಜೆಪಿ ಕಾರ್ಯಕರ್ತರು ಭಾನುವಾರವೂ ದೆಹಲಿಯ ವಿವಿಧೆಡೆಯಿಂದ ಜಂತರ್‌ಮಂತರ್‌ಗೆ ತೆರಳುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
1 ವರ್ಷ ಧರಣಿ ಮಾಡಲ್ಲ ಷರತ್ತಿನಡಿ ಜಿರಳೆಗಳ ಬಿಡುಗಡೆ: ಪೊಲೀಸ್
ನವದೆಹಲಿ: ಒಂದು ವರ್ಷದವರೆಗೆ ಸನ್ನಡತೆ, ಶಾಂತಿ ಕಾಪಾಡುವ ಷರತ್ತಿನ ಮೇಲೆ 50 ಸಾವಿರ ರು. ಬಾಂಡ್‌ನ ಶ್ಯೂರಿಟಿ ಪಡೆದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ದ ಮುಖಂಡರಾದ ಅಭಿಜೀತ್ ದೀಪ್ಕೆ, ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಭಾನುವಾರ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಯಾವ ಬಾಂಡ್‌ಗೂ ಸಹಿ ಹಾಕಿಲ್ಲ, ಮತ್ತೆ ಹೋರಾಟ: ದೀಪ್ಕೆ
ನಾಗಪುರ: 1 ವರ್ಷ ಪ್ರತಿಭಟನೆ ಮಾಡುವುದಿಲ್ಲ ಎಂಬ ಯಾವ ಬಾಂಡ್‌ಗೂ ನಾವು ಸಹಿ ಹಾಕಿಲ್ಲ. ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಹೆದರುವುದಿಲ್ಲ. ಸರ್ವಾಧಿಕಾರವನ್ನು ಕೊನೆಗಾಣಿಸುತ್ತೇವೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ.
ಶಾಂತಿಯುತವಾಗಿ ಪ್ರತಿಭಟಿಸುವವರನ್ನು ಬಂಧಿಸಬೇಡಿ: ಸುಪ್ರೀಂ
ನವದೆಹಲಿ: ಶನಿವಾರ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಹಾಗೂ ಪೊಲೀಸರು ತೆಗೆದುಕೊಂಡ ಕ್ರಮಗಳಿಂದ ಜನಜೀವನ ಅಸ್ತವ್ಯಸ್ತವಾದ ಬೆನ್ನಲ್ಲೇ, ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶಗಳನ್ನು ನೀಡಿದೆ. ಭಾನುವಾರ ರಜಾದಿನವಾದ ಹೊರತಾಗಿಯೂ ನಡೆದ ವಿಶೇಷ ವಿಚಾರಣೆ ವೇಳೆ, ‘ಶಾಂತಿಯುತವಾಗಿ ಒಂದೆಡೆ ಸೇರುವವರನ್ನು ಕಾನೂನುಬಾಹಿರವಾಗಿ ಬಂಧಿಸಬಾರದು. ಮೆಟ್ರೋ ಸಂಚಾರ ಆರಂಭಿಸಬೇಕು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಇಂಟರ್ನೆಟ್ ಸೇವೆ ಮರುಸ್ಥಾಪಿಸಬೇಕು’ ಎಂದು ನ್ಯಾ। ಜಯ್‌ಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರ ಪೀಠ ನಿರ್ದೇಶನ ನೀಡಿದೆ.

