ಅಯೋಧ್ಯೆಯಲ್ಲಿ ಗಣ್ಯರಿಗೆ ಅಚ್ಚುಕಟ್ಟಾದ ವ್ಯವಸ್ಥೆ

| Published : Jan 23 2024, 01:51 AM IST / Updated: Jan 23 2024, 07:50 AM IST

Ambani Family in Ayodhya

ಸಾರಾಂಶ

ಅಯೋಧ್ಯೆ ರಾಮಮಂದಿರದಲ್ಲಿ ಸಂತರು, ಕ್ರಿಕೆಟಿಗರು, ಉದ್ಯಮಿಗಳು, ರಾಜಕಾರಣಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು. ಅವರಿಗೆ ಸ್ಟಾರ್‌ ಹೋಟೆಲ್‌ನಲ್ಲಿ ವಾಸಕ್ಕೆ ಅವಕಾಶ ಮಾಡಲಾಗಿತ್ತು. ಜೊತೆಗೆ ಶುಚಿ-ರುಚಿಯಾದ ಊಟವನ್ನೂ ಉಣಬಡಿಸಲಾಯಿತು.

ಅಯೋಧ್ಯೆ: ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಗಣ್ಯರು, ನಟ-ನಟಿಯರು, ಕ್ರಿಕೆಟ್‌ ಪಟುಗಳು, ಇತರ ಕ್ರೀಡಾಪಟುಗಳು, ಸಾಧು ಸಂತರು, ರಾಜಕಾರಣಿಗಳು- ಹೀಗೆ ತರಹೇವಾರಿ ಪ್ರಮುಖರು ಸೋಮವಾರ ಅಯೋಧ್ಯೆಗೆ ಭೇಟಿ ನೀಡಿದ್ದರು. 

ಸುಮಾರು 8 ಸಾವಿರ ಗಣ್ಯರು ನಗರದಲ್ಲಿದ್ದು. ಆದರೆ ಯಾವುದೇ ಅವ್ಯವಸ್ಥೆಗೆ ಆಸ್ಪದ ಸಿಗದ ರೀತಿಯಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗಿತ್ತು.

ಪ್ರಾಣಪ್ರತಿಷ್ಠಾಪನೆ ವೇಳೆ ಮಂದಿರದ ಆವರಣದಲ್ಲಿ ಕುರ್ಚಿಗಳನ್ನು ಹಾಕಿ ಕೂರಲು ವ್ಯವಸ್ಥೆ ಮಾಡಲಾಗಿತ್ತು. ಮೋದಿ ಅವರು ರಾಮನ ಪ್ರತಿಷ್ಠಾಪನೆ ಮಾಡುತ್ತಿರುವಾಗ ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ನೇರಪ್ರಸಾರ ಮಾಡಲಾಯಿತು. 

ಗಣ್ಯರ ಪೈಕಿ, ಉದ್ಯಮಿಗಳಿಗೆ ಒಂದು ಕಡೆ, ರಾಜಕಾರಣಿಗಳಿಗೆ ಮತ್ತೊಂದು ಕಡೆ, ಚಿತ್ರ ನಟ-ನಟಿಯರಿಗೆ ಒಂದು ನಿರ್ದಿಷ್ಟ ಭಾಗದಲ್ಲಿ, ಕ್ರಿಕೆಟಿಗರಿಗೆ ಇನ್ನೊಂದು ಭಾಗದಲ್ಲಿ- ಹೀಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.ಇನ್ನು ಸಾಧು ಸಂತರು, ಸ್ವಾಮೀಜಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಸಮಾರಂಭ ಮುಗಿದ ನಂತರ ಎಲ್ಲರಿಗೂ ಶುಚಿ-ರುಚಿಯಾದ ಊಟ ಉಣಬಡಿಸಲಾಯಿತು ಹಾಗೂ ರಾಮನ ಪ್ರಸಾದವನ್ನು ನೀಡಲಾಯಿತು.

ಇನ್ನು ಬಹುತೇಕ ಗಣ್ಯರು ಮಂಗಳವಾರವೇ ಅಯೋಧ್ಯೆಗೆ ಲಗ್ಗೆ ಇಟ್ಟಿದ್ದರು. ಮೊದಲೇ ಅವರ ಬರುವುದನ್ನು ಖಚಿತಪಡಿಸಿಕೊಂಡು ಎಲ್ಲರಿಗೂ ಸ್ಟಾರ್‌ ಹೋಟೆಲ್‌ಗಳಲ್ಲಿ ರೂಂ ಬುಕ್‌ ಮಾಡಲಾಗಿತ್ತು. 

ಹೋಟೆಲ್‌ನಿಂದ ಮಂದಿರಕ್ಕೆ ಬರಲು ಕಾರುಗಳನ್ನು ನೀಡಲಾಗಿತ್ತು.ಗಣ್ಯರನ್ನು ಹೊತ್ತು ತಂದ ಚಾರ್ಟರ್ಡ್‌ ವಿಮಾನಗಳಿಗೆ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಬಹುಹೊತ್ತು ನಿಲ್ಲಲು ಸ್ಥಳಾಭಾವ ಇತ್ತು. 

ಹೀಗಾಗಿ ಸಮೀಪದ ವಾರಾಣಸಿ, ಲಖನೌ, ಆಗ್ರಾ ಹೀಗೆ ಮೊದಲಾದ ಏರ್‌ಪೋರ್ಟ್‌ಗಳಲ್ಲಿ ವಿಮಾನ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಿಜೆಪಿ, ಮಂದಿರ ಹೋರಾಟಗಾರರ ಆನಂದಬಾಷ್ಪ
ರಾಮಮಂದಿರ ಹೋರಾಟದಿಂದಲೇ ಜನಮಾನಸದಲ್ಲಿ ಪ್ರವರ್ಧಮಾನಕ್ಕೆ ಬಂದ ಬಿಜೆಪಿಗರು ಸೋಮವಾರ ರಾಮ ಪ್ರತಿಷ್ಠಾಪನೆ ಆಗುತ್ತಿದ್ದಂತೆಯೇ ಆನಂದಬಾಷ್ಪ ಸುರಿಸಿದ ಪ್ರಸಂಗ ಅಯೋಧ್ಯೆಯಲ್ಲಿ ನಡೆಯಿತು.

ರಾಮಮಂದಿರ ಹೋರಾಟದಲ್ಲಿ ಸಕ್ರಿಯರಾಗಿದ್ದ ಸಾಧ್ವಿ ಋತಾಂಬರಾ ಹಾಗೂ ಬಿಜೆಪಿ ನಾಯಕ ರವಿಶಂಕರ ಪ್ರಸಾದ್‌ ಅವರು ಆನಂದದ ಕಣ್ಣೀರು ಸುರಿಸುತ್ತಿದ್ದುದು ಕಂಡುಬಂತು. 

ಪ್ರತಿಷ್ಠಾಪನೆ ವೇಳೆ ಪ್ರಸಾದ್‌ ತಾವು ಮನೆಯಿಂದ ತಂದಿದ್ದ ಚಿಕ್ಕ ಗಂಟೆಯನ್ನು ಬಾರಿಸುತ್ತಿದ್ದರು. ಇನ್ನು ಕನಸು ನನಸಾದ ಸಂತಸದಲ್ಲಿ ಮಂದಿರ ಹೋರಾಟಗಾರ್ತಿ ಹಾಗೂ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ಸಾಧ್ವಿ ಋತಾಂಬರಾರನ್ನು ಅಪ್ಪಿಕೊಂಡು ಕಣ್ಣೀರು ಹಾಕಿದರು. ಇನ್ನು ಕಂಚಿ ಶ್ರೀ ವಿಜಯೇಂದ್ರ ಸರಸ್ವತಿ ಅವರ ಕಣ್ಣಂಚಿನಲ್ಲೂ ನೀರಾಡಿದ್ದು ಕಂಡುಬಂತು.