ಸಾರಾಂಶ
: 2027ರ ಮೊದಲ ಹಂತದ ಜನಗಣತಿಗೆ ಪೂರ್ವಭಾವಿಯಾಗಿ ಇದೇ ವರ್ಷದ ನ.10ರಿಂದ 30ರ ವರೆಗೆ ಗಣತಿಪೂರ್ವ ಸಿದ್ಧತೆಗಳ ಭಾಗವಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯ್ದ ಸ್ಥಳಗಳಲ್ಲಿರುವ ಮನೆಗಳ ಪಟ್ಟಿ ಮಾಡಿ, ಗಣತಿ ನಡೆಸಲಾಗುವುದು.
ನವದೆಹಲಿ: 2027ರ ಮೊದಲ ಹಂತದ ಜನಗಣತಿಗೆ ಪೂರ್ವಭಾವಿಯಾಗಿ ಇದೇ ವರ್ಷದ ನ.10ರಿಂದ 30ರ ವರೆಗೆ ಗಣತಿಪೂರ್ವ ಸಿದ್ಧತೆಗಳ ಭಾಗವಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯ್ದ ಸ್ಥಳಗಳಲ್ಲಿರುವ ಮನೆಗಳ ಪಟ್ಟಿ ಮಾಡಿ, ಗಣತಿ ನಡೆಸಲಾಗುವುದು. ಜತೆಗೆ, ನ.1ರಿಂದ 7ರ ವರೆಗೆ ಸ್ವಯಂ ಗಣತಿಗೂ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2026ರ ಏ.1 ಮತ್ತು 2027ರ ಫೆ.28ರ ನಡುವೆ ನಡೆಯಲಿರುವ 2 ಹಂತದ ಗಣತಿಗೆ ಮಾಡಿಕೊಂಡ ಸಿದ್ಧತೆ ಎಷ್ಟುಪರಿಣಾಮಕಾರಿಯಾಗಿದೆ ಎಂಬುದನ್ನು ಅಳೆಯಲು ಈ ಪೂರ್ವಭಾವಿ ಗಣತಿ ನಡೆಸುತ್ತಿರುವುದಾಗಿ, ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಜಾತಿ ಗಣತಿಯನ್ನೂ ಒಳಗೊಂಡಿರುವ ಇದು, ದೇಶದಲ್ಲಿ ನಡೆಯುತ್ತಿರುವ ಮೊದಲ ಡಿಜಿಟಲ್ ಗಣತಿಯಾಗಲಿದೆ.
ಏನೇನಿರುತ್ತದೆ?:
ಪರೀಕ್ಷಾ ಹಂತದ ಗಣತಿಯಲ್ಲಿ ಪ್ರಶ್ನೆಗಳು, ದತ್ತಾಂಶ ಸಂಗ್ರಹಣೆ, ತರಬೇತಿ, ಸರಕು, ಮೊಬೈಲ್ ಅಪ್ಲಿಕೇಶನ್ ಮತ್ತು ಸಾಫ್ಟ್‌ವೇರ್ ಪರಿಶೀಲನೆ ನಡೆಸಿ, ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ಅವುಗಳನ್ನು ಪರಿಹರಿಸಲಾಗುವುದು.
2 ಹಂತದ ಗಣತಿ:
ಜನಗಣತಿಯನ್ನು 2 ಹಂತದಲ್ಲಿ ನಡೆಸಲಾಗುವುದು. ಮೊದಲ ಹಂತದಲ್ಲಿ ಪ್ರತಿ ಮನೆಯ ಪರಿಸ್ಥಿತಿ, ಆಸ್ತಿ, ಸೌಕರ್ಯಗಳನ್ನು ಪರಿಗಣಿಸಲಾಗುವುದು. 2ನೇ ಹಂತದಲ್ಲಿ ಜನಸಂಖ್ಯೆ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ, ಸಂಸ್ಕೃತಿ ಸೇರಿದಂತೆ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲಾಗುವುದು.