ಸಾರಾಂಶ
ನವದೆಹಲಿ: ವಿಮಾನ ವಿಳಂಬದ ಸಮಯದಲ್ಲಿ ಅವ್ಯವಸ್ಥೆಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯ, ಬೆಂಗಳೂರು ಸೇರಿದಂತೆ ದೇಶದ 6 ಪ್ರಮುಖ (ಮೆಟ್ರೋ) ವಿಮಾನ ನಿಲ್ದಾಣಗಳಲ್ಲಿ ಆರು ಅಂಶಗಳ ಆಕ್ಷನ್ ಪ್ಲಾನ್ ಸಿದ್ಧಪಡಿಸಿದೆ.
ಇದರಲ್ಲಿ ವಾರ್‌ರೂಂ ಸ್ಥಾಪನೆ ಕೂಡ ಸೇರಿದೆ ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು, ‘ದೇಶದ ಪ್ರಮುಖ 6 ಮೆಟ್ರೊ ನಗರಗಳ ವಿಮಾನ ನಿಲ್ದಾಣಗಳಲ್ಲಿ ತುರ್ತು ನಿರ್ವಹಣೆಗೆ ವಾರ್‌ರೂಂ ತೆರೆಯಲಾಗುವುದು.
ಅಲ್ಲದೆ ಆ ನಿಲ್ದಾಣಗಳಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ಸುರಕ್ಷತೆಗೆ ನಿಯೋಜಿಸಲಾಗುವುದು. ಅಲ್ಲದೆ ಈ ವಿಮಾನ ನಿಲ್ದಾಣಗಳು ದಿನಕ್ಕೆ ಮೂರು ಬಾರಿ ತಾವು ತೆಗೆದುಕೊಂಡ ಕ್ರಮಗಳನ್ನು ವಿಮಾನಯಾನ ಸಚಿವಾಲಯಕ್ಕೆ ವರದಿ ನೀಡಬೇಕು’ ಎಂದಿದ್ದಾರೆ.
ವಿಶೇಷವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ರನ್‌ವೇ 29-ಎಲ್‌ನ್ನು 3ನೇ ಕೆಟಗರಿಗೆ ಉನ್ನತೀಕರಿಸಲಾಗಿದ್ದು, ಅದರಿಂದ ಮಂಜು ಆವರಿಸಿದ ಸಮಯದಲ್ಲೂ ವಿಮಾನವನ್ನು ಹಾರಿಸಬಹುದಾಗಿದೆ. ಈ ಸೌಲಭ್ಯವನ್ನು ಬುಧವಾರದಿಂದಲೇ ಲೋಕಾರ್ಪಣೆ ಮಾಡಲಾಗಿದೆ.
ಜೊತೆಗೆ ದೆಹಲಿ ವಿಮಾನ ನಿಲ್ದಾಣದ ರನ್‌ವೇ 10/28ನ್ನೂ ಸಹ ಕೆಟಗರಿ-3ಕ್ಕೆ ಶೀಘ್ರದಲ್ಲೇ ಮೇಲ್ದರ್ಜೆಗೇರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಕ್ಷನ್ ಪ್ಲಾನ್‌ನಲ್ಲಿ ತಿಳಿಸಿದೆ.
ಏನಿದು ವಾರ್ ರೂಂ?
ಭಾರತದ ಪ್ರಮುಖ 6 ಮೆಟ್ರೊ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ತುರ್ತು ಸೌಲಭ್ಯ ಅಗತ್ಯವಿದ್ದಾಗ ಆದ್ಯತೆಯ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಲು ವಾರ್ ರೂಂಗಳನ್ನು ತೆರೆಯಲಾಗುತ್ತದೆ. ಪ್ರಯಾಣಿಕರಿಗೆ ಅನಾನುಕೂಲವಾಗುವುದನ್ನು ನಿಗ್ರಹಿಸುವ ದೃಷ್ಟಿಯಲ್ಲಿ ಇವು ಕಾರ್ಯ ನಿರ್ವಹಿಸುತ್ತವೆ.
6 ಅಂಶಗಳ ಆಕ್ಷನ್ ಪ್ಲಾನ್ ಏನು?
1. ದೇಶದ 6 ಪ್ರಮುಖ ಮೆಟ್ರೊ ನಗರಗಳ ವಿಮಾನ ನಿಲ್ದಾಣಗಳಿಂದ ಸರ್ಕಾರಕ್ಕೆ ದಿನಕ್ಕೆ 3 ಬಾರಿ ವಾಸ್ತವಿಕ ವರದಿ
2. ವಿಮಾನ ನಿಲ್ದಾಣಗಳಿಂದ ವಿಮಾನ ಪ್ರಾಧಿಕಾರದ ಎಲ್ಲ ಆದೇಶಗಳು, ಕಾರ್ಯವಿಧಾನಗಳ ಜಾರಿ ಮತ್ತು ಮೇಲ್ವಿಚಾರಣೆ
3. ದೇಶದ ಪ್ರಮುಖ 6 ಮೆಟ್ರೊ ನಗರಗಳ ವಿಮಾನ ನಿಲ್ದಾಣಗಳಲ್ಲಿ ವಾರ್ ರೂಂ ಸ್ಥಾಪನೆ
4. ವಿಮಾನ ನಿಲ್ದಾಣ ಸುರಕ್ಷತೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ನಿಯೋಜನೆ
5. ದೆಹಲಿ ವಿಮಾನ ನಿಲ್ದಾಣದ ರನ್‌ವೇ 29ಎಲ್ 3ನೇ ಕೆಟಗರಿಗೆ ಮೇಲ್ದರ್ಜೆಗೇರಿಸಿ ಕಾರ್ಯಾಚರಣೆ ಪ್ರಾರಂಭ
6. ದೆಹಲಿ ವಿಮಾನ ನಿಲ್ದಾಣದ ರನ್‌ವೇ 10/28ನ್ನು 3ನೇ ಕೆಟಗರಿಗೆ ಶೀಘ್ರ ಮೆಲ್ದರ್ಜೆಗೆ
ಮಧುಚಂದ್ರ ತಡವಾಗುವ ಬೇಸರದಿಂದ ಪೈಲಟ್‌ಗೆ ಹೊಡೆದೆ: ಪ್ರಯಾಣಿಕ
ನವದೆಹಲಿ: ಪ್ರತಿಕೂಲ ಹವಾಮಾನದ ಪರಿಣಾಮ ದೆಹಲಿಯಿಂದ ಗೋವಾಗೆ ತೆರಳಬೇಕಿದ್ದ ಇಂಡಿಗೋ ವಿಮಾನವು ಭಾನುವಾರ 10 ಗಂಟೆಗೂ ಹೆಚ್ಚು ಕಾಲ ತಡವಾಗಿದ್ದರಿಂದ ಆಕ್ರೋಶಗೊಂಡು ಸಹ ಪೈಲಟ್ ಮೇಲೆ ಹಲ್ಲೆ ಮಾಡಿದ್ದ ಪ್ರಯಾಣಿಕ ಸಾಹಿಲ್ ಕಟಾರಿಯಾ, ‘ನಾನು ಗೋವಾಗೆ ಮಧುಚಂದ್ರಕ್ಕೆ ಹೊರಟಿದ್ದೆ.
ಮದುಚಂದ್ರ ವಿಳಂಬವಾಗುತ್ತಿದ್ದರಿಂದ ತನ್ನ ಸಹನೆಯ ಕಟ್ಟೆಯೊಡೆದು ಕೃತ್ಯ ಎಸಗಿದೆ’ ಎಂದು ಪೊಲೀಸರ ಮುಂದೆ ತಿಳಿಸಿದ್ದಾನೆ.ಆದರೆ ಈತನ ಹೇಳಿಕೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. ‘ಸಾಹಿಲ್‌ಗೆ ಮದುವೆ ಆಗಿದ್ದು ನಿನ್ನೆ, ಮೊನ್ನೆ ಅಲ್ಲ.
5 ತಿಂಗಳ ಹಿಂದೆ. ಮಧುಚಂದ್ರಕ್ಕೆ ಹೋಗುತ್ತಿದ್ದೆ ಎಂದು ಕರುಣೆ ಗಿಟ್ಟಿಸಲು ಕಟ್ಟುಕತೆ ಹೆಣೆಯುತ್ತಿದ್ದಾನೆ’ ಎಂದಿದ್ದಾರೆ.ಸಾಹಿಲ್ ಕಟಾರಿಯಾ ದೆಹಲಿಯಲ್ಲಿ ಗೊಂಬೆ ಅಂಗಡಿ ಇಟ್ಟುಕೊಂಡಿದ್ದಾನೆ.
ಗೋವಾಕ್ಕೆ ವಿಮಾನದಲ್ಲಿ ತೆರಳುತ್ತಿದ್ದಾಗ ವಿಮಾನ ವಿಳಂಬವಾಗಿ ಪೈಲಟ್‌ಗೆ ಹೊಡೆದಿದ್ದ. ನಂತರ ಪೊಲೀಸರು ಆತನನ್ನು ಬಂಧಿಸಿದ್ದರು. ಇಂಡಿಗೋ ಸಂಸ್ಥೆ ಆತನ ಕೃತ್ಯವನ್ನುಅಶಿಸ್ತು ಎಂದು ಪರಿಗಣಿಸಿ ಆಂತರಿಕ ತನಿಖೆ ನಡೆಸುತ್ತಿದೆ.