ಸಾರಾಂಶ
ಜಾಮೀನಿಗೆ ಹಣವನ್ನು ಒತ್ತೆ ಇಡಲು ಕಾಸಿಲ್ಲದ ಬಡ ಕೈದಿಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
ನವದೆಹಲಿ: ಜಾಮೀನು ಪಡೆಯುವ ಅವಕಾಶ ಇದ್ದರೂ, ಅದಕ್ಕೆ ಅಗತ್ಯವಾದ ಹಣ ನೀಡಲು ಸಾಧ್ಯವಾಗದೇ ಜೈಲಲ್ಲೇ ಕೊಳೆಯುತ್ತಿರುವ ಕೈದಿಗಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ.
ಇಂಥ ಕೈದಿಗಳ ಜಾಮೀನು ಹಣ ಪಾವತಿಗೆ 20 ಕೋಟಿ ರು.ಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ.
ಅಲ್ಲದೆ ಈ ಸಂಬಂಧ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ಉನ್ನತಾಧಿಕಾರಿಗಳ ಸಮಿತಿ ಸ್ಥಾಪಿಸುವಂತೆ ತಿಳಿಸಿದೆ.
ಜೊತೆಗೆ ರಾಜ್ಯಕ್ಕೊಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲು ಸೂಚಿಸಿದೆ. ನೋಡಲ್ ಅಧಿಕಾರಿಗಳು ಕೇಂದ್ರ ಗ್ರಹ ಇಲಾಖೆಯ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೂ ನೋಡಲ್ ಅಧಿಕಾರಿಯೊಂದಿಗೆ ಸಂಪರ್ಕಿಸಿ ಕಾರ್ಯನಿರ್ವಹಿಸಲಿದ್ದಾರೆ.