ಕೋಚಿಂಗ್‌ ಸೆಂಟರ್‌ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

| Published : Jan 19 2024, 01:46 AM IST / Updated: Jan 19 2024, 04:04 PM IST

 coaching center in kota
ಕೋಚಿಂಗ್‌ ಸೆಂಟರ್‌ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಕೋಚಿಂಗ್‌ ಸೆಂಟರ್‌ಗಳಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 16 ವರ್ಷಕ್ಕಿಂತ ಕಡಿಮೆ ವಯೋಮಾನದ ವಿದ್ಯಾರ್ಥಿಗಳನ್ನು ಕೊಚಿಂಗ್‌ ಸೆಂಟರ್‌ಗಳಿಗೆ ಸೇರಿಸಿಕೊಳ್ಳುವಂತಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದೆ.

ನವದೆಹಲಿ: ರಾಜಸ್ಥಾನದಲ್ಲಿರುವ ಕೋಚಿಂಗ್ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋಚಿಂಗ್‌ ಸೆಂಟರ್‌ಗಳಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 

16 ವರ್ಷಕ್ಕಿಂತ ಕಡಿಮೆ ವಯೋಮಾನದ ವಿದ್ಯಾರ್ಥಿಗಳನ್ನು ಕೊಚಿಂಗ್‌ ಸೆಂಟರ್‌ಗಳಿಗೆ ಸೇರಿಸಿಕೊಳ್ಳುವಂತಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದೆ.

ವಿದ್ಯಾರ್ಥಿಗಳ ಹಿತರಕ್ಷಣೆ, ಇದಕ್ಕಾಗಿ ಕಾನೂನಿನ ಚೌಕಟ್ಟು ರೂಪಿಸಲು ಮತ್ತು ಖಾಸಗಿ ಕೋಚಿಂಗ್ ಸೆಂಟರ್‌ಗಳ ಅನಿಯಂತ್ರಿತ ಬೆಳವಣಿಗೆಯನ್ನು ನಿರ್ವಹಿಸಲು ಈ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. 

ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ, ಅಗ್ನಿ ಅವಗಢಗಳು, ಕೋಚಿಂಗ್‌ ಸೆಂಟರ್‌ಗಳಲ್ಲಿ ಸೌಲಭ್ಯದ ಕೊರತೆ ಹಾಗೂ ಬೋಧನಾ ವಿಧಾನಗಳಲ್ಲಿರುವ ದೋಷಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 

ಮಾರ್ಗಸೂಚಿಯಲ್ಲೇನಿದೆ?:ಕೋಚಿಂಗ್‌ ಸೆಂಟರ್‌ಗಳು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಿಸಿಕೊಳ್ಳುವಂತಿಲ್ಲ. ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಮೊದಲು ಕೋಚಿಂಗ್ ಸೆಂಟರ್‌ಗಳು ಉತ್ತಮ ರ್‍ಯಾಂಕ್‌ ಅಥವಾ ಅಂಕ ಕೊಡಿಸುವುದಾಗಿ ಪೋಷಕರಿಗೆ ಭರವಸೆ ನೀಡುವಂತಿಲ್ಲ. 

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವಂತಿಲ್ಲ. ತರಬೇತಿಯ ಗುಣಮಟ್ಟ, ಸೌಲಭ್ಯಗಳ ಬಗ್ಗೆ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ. 

ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಬೋಧಕರಾಗಿ ನೇಮಿಸಿಕೊಳ್ಳುವಂತಿಲ್ಲ. ಈ ಮಾರ್ಗಸೂಚಿಗಳನ್ನು ಪಾಲನೆ ಮಾಡದಿದ್ದರೆ ಕೋಚಿಂಗ್‌ ಸೆಂಟರ್‌ಗಳಿಗೆ ಪರವಾನಗಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಅಲ್ಲದೇ ಕೋಚಿಂಗ್ ಸೆಂಟರ್‌ಗಳು ಸೌಲಭ್ಯ, ಬೋಧಕರು ಸೇರಿದಂತೆ ಎಲ್ಲಾ ಮಾಹಿತಿಯನ್ನು ಹೊಂದಿರುವ ವೆಬ್‌ಸೈಟ್‌ ಹೊಂದಿರಬೇಕು ಎಂದೂ ಸಹ ತಿಳಿಸಿದೆ.