ಕೇಂದ್ರದಿಂದ 25 ರು.ಗೆ ಅಕ್ಕಿ ಮಾರಾಟಕ್ಕೆ ಚಿಂತನೆ

| Published : Dec 28 2023, 01:47 AM IST

ಕೇಂದ್ರದಿಂದ 25 ರು.ಗೆ ಅಕ್ಕಿ ಮಾರಾಟಕ್ಕೆ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ಪಾದನೆ ಕುಸಿತ, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನರಿಗೆ ನೆರವಿನ ಹಸ್ತ ಚಾಚಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಭಾರತ್‌ ಬ್ರ್ಯಾಂಡ್‌ನಡಿ ಅಕ್ಕಿ, ತೊಗರಿ ಬೇಳೆ ಮಾರಾಟ ಸಾಧ್ಯತೆಯಿದೆ.

ನವದೆಹಲಿ: ಈ ವರ್ಷ ಮುಂಗಾರು ವ್ಯತ್ಯಯದಿಂದಾಗಿ ಭತ್ತದ ಉತ್ಪಾದನೆ ಕುಸಿದು, ಬೆಲೆ ಗಗನಮುಖಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ರಿಯಾಯಿತಿ ದರದಲ್ಲಿ ಜನಸಾಮಾನ್ಯರಿಗೆ ಅಕ್ಕಿ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಭಾರತ್‌ ಬ್ರಾಂಡ್‌ ಅಡಿಯಲ್ಲಿ ಬೇಳೆಕಾಳುಗಳನ್ನು ನಾಫೆಡ್‌, ಎನ್‌ಸಿಸಿಎಫ್‌, ಕೇಂದ್ರೀಯ ಭಂಡಾರ್‌ ಹಾಗೂ ಸಂಚಾರಿ ವಾಹನಗಳಲ್ಲಿ ಇವುಗಳ ಮಾರಾಟ ಮಾಡಲಾಗುತ್ತಿದೆ. ಅದರ ಜೊತೆಗೆ ಕೆಜಿಗೆ 25 ರು.ನಂತೆ ಭಾರತ್‌ ರೈಸ್‌ ಹೆಸರಿನಲ್ಲಿ ಅಕ್ಕಿಯನ್ನೂ ಮಾರಾಟ ಮಾಡುವ ಸಾಧ್ಯತೆ ಇದೆ.ದೇಶವ್ಯಾಪಿ ಬಳಕೆಯಾಗುವ ಅಕ್ಕಿದರ ಏರಿಕೆ, ಮುಂಬರುವ ಲೋಕಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗಿದೆ ಎನ್ನಲಾಗಿದೆ.ಅಕ್ಕಿಯ ಜೊತೆಗೆ ಮತ್ತೊಂದು ಪ್ರಮುಖ ದಿನಬಳಕೆಯ ವಸ್ತುವಾದ ತೊಗರಿಬೇಳೆಯನ್ನು ಕೂಡಾ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಸಾಧ್ಯತೆ. ರೈತರಿಂದ ತೊಗರಿಯನ್ನು ಖರೀದಿಸಿ ಅದನ್ನು ಭಾರತ್‌ ಕಡಲೆ ಬೇಳೆ ಬೆಲೆಯಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಭಾರತೀಯ ಬೇಳೆಕಾಳುಗಳ ಸಂಸ್ಥೆಯ ಮುಖ್ಯಸ್ಥ ಬಿಮಲ್ ಕೊಥಾರಿ ಹೇಳಿದ್ದಾರೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಬೇಳೆಕಾಳು ಲಭ್ಯವಾಗಲಿ ಎಂಬ ಕಾರಣಕ್ಕೆ ‘ಭಾರತ್‌’ ಯೋಜನೆಯನ್ನು ಸರ್ಕಾರ ಆರಂಭಿಸಿದ್ದು, ಈ ಯೋಜನೆಯಡಿಯಲ್ಲಿ ಈಗಾಗಲೇ 27.5 ರು.ಗೆ ಗೋಧಿ ಹಿಟ್ಟು, 60 ರು.ಗೆ ಕಡಲೆ ಬೇಳೆಗಳನ್ನು 2 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ರೈತರಿಂದ ನೇರವಾಗಿ ಇವುಗಳನ್ನು ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಿ ದಾಸ್ತಾನು ಮಾಡಲಿದ್ದು, ಬಳಿಕ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ.