ಇದು ನ್ಯಾಯಾಂಗದ ವ್ಯಾಪ್ತಿಗೆ ಬರಲ್ಲಧಾರ್ಮಿನ ನಂಬಿಕೆ ಇದು: ಕೇಂದ್ರಪಿಟಿಐ ನವದೆಹಲಿ

ಋತುಸ್ರಾವವಾಗುವ ವಯಸ್ಸಿನ ಸ್ತ್ರೀಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸುವುದಕ್ಕೆ ಕೇಂದ್ರ ಸರ್ಕಾರವು ಬೆಂಬಲ ವ್ಯಕ್ತಪಡಿಸಿದ್ದು, ‘ಇದು ನ್ಯಾಯಾಂಗ ವ್ಯಾಪ್ತಿಗೆ ಒಳಪಡದೆ, ಧಾರ್ಮಿಕ ನಂಬಿಕೆಯಡಿ ಬರುತ್ತದೆ’ ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ 9 ಜಡ್ಜ್‌ಗಳ ಪೀಠದಲ್ಲಿ ವಿಚಾರಣೆಗೆ ಬಂದಿದ್ದ ಈ ಪ್ರಕರಣದ ತನಿಖೆ ವೇಳೆ ಸರ್ಕಾರದ ಪರ ವಕೀಲ ತುಷಾರ್‌ ಮೆಹ್ತಾ ವಾದಿಸಿ, ‘ಗುರುದ್ವಾರಕ್ಕೆ ಹೋದಾಗ ಅಲ್ಲಿನ ಸಂಪ್ರದಾಯದಂತೆ ತಲೆಯನ್ನು ವಸ್ತ್ರದಿಂದ ಮುಚ್ಚಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವುದರಿಂದ ನನ್ನ ಘನತೆ ಅಥವಾ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎನ್ನಲಾಗದು. ಪದ್ಧತಿಗಳು ತರ್ಕಬದ್ಧ, ಆಧುನಿಕ, ವೈಜ್ಞಾನಿಕ ಅಥವಾ ಸಾಂವಿಧಾನಿಕ ನೈತಿಕತೆಯನ್ನು ಆಧರಿಸಿವೆಯೇ ಎಂದು ಕೋರ್ಟ್‌ ಪರಿಶೀಲಿಸಲಾಗದು. ಇದು ಅವುಗಳನ್ನು ನ್ಯಾಯಾಧೀಶರ ವ್ಯಕ್ತಿನಿಷ್ಠ ದೃಷ್ಟಿಕೋನಕ್ಕೆ ಒಳಪಡಿಸಿದಂತಾಗುತ್ತದೆ’ ಎಂದರು.ಮಂಗಳವಾರ ಆರಂಭವಾಗಿರುವ ಪ್ರಕರಣದ ವಿಚಾರಣೆಯು ಏ.22ರ ವರೆಗೆ ನಡೆಯುವ ನಿರೀಕ್ಷೆಯಿದೆ.

==

ಮುಟ್ಟಿನ ವೇಳೆ ಸ್ತ್ರೀಗೆ ಅಸ್ಪೃಶ್ಯ ಪಟ್ಟ: ನ್ಯಾ। ನಾಗರತ್ನ ಕಿಡಿ

3 ದಿನ ಸ್ತ್ರೀಯರನ್ನು ಅಸ್ಪೃಶ್ಯರು ಎನ್ನಲಾಗದು: ಜಡ್ಜ್‌


ಪಿಟಿಐ ನವದೆಹಲಿ

ಮುಟ್ಟಿನ ವೇಳೆ 3 ದಿನ ಸ್ತ್ರೀಗೆ ಅಸ್ಪೃಶ್ಯ ಪಟ್ಟ ಕಟ್ಟುವುದಕ್ಕೆ ಸುಪ್ರೀಂ ಕೋರ್ಟ್‌ನ ನ್ಯಾ। ಬಿ.ವಿ. ನಾಗರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ತಿಂಗಳಿನ 3 ದಿನ ಮಹಿಳೆಯರನ್ನು ಅಸ್ಪೃಶ್ಯರೆಂದು ಪರಿಗಣಿಸಿ, ನಾಲ್ಕನೇ ದಿನ ಅದನ್ನು ನಿಲ್ಲಿಸುವುದು ಸರಿಯಲ್ಲ’ ಎಂದು ಅವರು, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತ ಪ್ರಕರಣದ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದಾರೆ.ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೀಠದ ಭಾಗವಾಗಿರುವ ನಾಗರತ್ನ, ‘ಶಬರಿಮಲೆ ವಿಷಯದಲ್ಲಿ 17ನೇ ವಿಧಿಯನ್ನು (ಅಸ್ಪೃಶ್ಯತೆ ರದ್ದು) ಹೇಗೆ ಪರಿಗಣಿಸಬೇಕೋ ತಿಳಿಯದು. ಒಬ್ಬ ಮಹಿಳೆಯಾಗಿ ಮಾತನಾಡುವುದಾದರೆ, 3 ದಿನ ಸ್ತ್ರೀಯರನ್ನು ಅಸ್ಪೃಶ್ಯರಂತೆ ನಡೆಸಿಕೊಂಡು 4ನೇ ದಿನ ಅದರಿಂದ ಮುಕ್ತಿ ನೀಡುವುದು ಸರಿಯಲ್ಲ’ ಎಂದರು.

ಜತೆಗೆ, ‘ವಿಶ್ವಾದ್ಯಂತವಿರುವ ಅಯ್ಯಪ್ಪಸ್ವಾಮಿ ದೇವಸ್ಥಾನಗಳು ಮಹಿಳೆಯರಿಗೆ ಮುಕ್ತವಾಗಿರುವ ನಡುವೆ ಶಬರಿಮಲೆಯದ್ದು ವಿಶೇಷ ಪ್ರಕರಣವಾಗಿದೆ. ಈ ನಿರ್ಬಂಧವು ವಯಸ್ಸಿನ ಆಧಾರದಲ್ಲಿ ಆಗಿದೆಯೇ ಹೊರತು ಋತುಸ್ರಾವಕ್ಕೆ ಸಂಬಂಧಿಸಿದ್ದಲ್ಲ’ ಎಂದರು.