ಸಾರಾಂಶ
ನವದೆಹಲಿ: ಭಾರತದಲ್ಲಿ 23.4 ಕೋಟಿ ಜನರು ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಕಡು ಬಡವರನ್ನು ಹೊಂದಿರುವ ಟಾಪ್ 5 ರಾಷ್ಟ್ರಗಳಲ್ಲಿ ಭಾರತ ನಂ.1 ಎಂದು ಹೇಳಿದೆ.
ಉಳಿದಂತೆ ಕ್ರಮೇಣವಾಗಿ ಪಾಕಿಸ್ತಾನ 9.3 ಕೋಟಿ ಕಡು ಬಡವರನ್ನು ಹೊಂದಿದ್ದು, 2ನೇ ಸ್ಥಾನದಲ್ಲಿದೆ. ಇಥಿಯೋಪಿಯಾ 8.6 ಕೋಟಿ, ನೈಜೀರಿಯಾ 7.4 ಕೋಟಿ ಹಾಗೂ ಕಾಂಗೋ 6.6 ಕೋಟಿ ಜನರನ್ನು ಹೊಂದಿರುವ ದೇಶಗಳು ನಂತರದ ಸ್ಥಾನಗಳಲ್ಲಿವೆ.ವರದಿ ಪ್ರಕಾರ, ವಿಶ್ವಾದ್ಯಂತ 110 ಕೋಟಿ ಜನರು ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರಲ್ಲಿ 58.4 ಕೋಟಿ ಜನ ಅಪ್ರಾಪ್ತರೇ ಇದ್ದಾರೆ ಎಂದು ಹೇಳಿದೆ. ಇದು ಮಾಧ್ಯಮ ಮಾನವ ಅಭಿವೃದ್ಧಿ ಸೂಚ್ಯಂಕವೆಂದು ಹೇಳಿದೆ.
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಿಜೆಪಿ ನಾಯಕಿ ವಿಜಯಾ ಕಿಶೋರ್
ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಿಜೆಪಿ ನಾಯಕಿ ವಿಜಯಾ ಕಿಶೋರ್ ರಾಹತ್ಕರ್ ಅವರನ್ನು ನೂತನ ಅಧ್ಯಕ್ಷೆಯಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ 1990 ಸೆಕ್ಷನ್ 3ರ ಅಡಿಯಲ್ಲಿ ನೇಮಕ ಮಾಡಲಾಗಿದ್ದು, ಅವರು 3 ವರ್ಷ ಇಲ್ಲವೇ ಅವರಿಗೆ 65 ವರ್ಷ ತುಂಬುವವರೆಗೆ- ಇದರಲ್ಲಿ ಯಾವುದು ಮೊದಲು ಬರುತ್ತದೆಯೋ ಅಲ್ಲಿವರೆಗೆ ಅಧಿಕಾರದಲ್ಲಿರುತ್ತಾರೆ. ತಕ್ಷಣದಿಂದಲೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇದೇ ವೇಳೆ, ಡಾ. ಅರ್ಚನಾ ಮಜುಮ್ದಾರ್ ಆಯೋಗಕ್ಕೆ ಸದಸ್ಯೆಯಾಗಿ ನೇಮಕವಾಗಿದ್ದಾರೆ.
ಮನೆಯಲ್ಲಿ ನಿಷೇಧಿತ ಡ್ರಗ್ಸ್ ಪತ್ತೆ: ಮಲಯಾಳಿ ನಟಿ ಬಂಧನ
ಕೊಲ್ಲಂ (ಕೇರಳ): ಇತ್ತೀಚೆಗೆ ಕೇರಳ ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಧಾರಾವಾಹಿ ನಟಿಯೊಬ್ಬರ ಮನೆಯಲ್ಲಿ ನಿಷೇಧಿತ ಮಾದಕವಸ್ತು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ನಟಿಯ ಹೆಸರು ಶಾಮನಾಥ್. ಈಕೆ ಕೊಲ್ಲಂನ ಓಜಿವುಪಾರ ನಿವಾಸಿ. ಈಕೆಯ ಮನೆಯಲ್ಲಿ 2 ಮಿಲಿ ಗ್ರಾಂ ನಿಷೇಧಿತ ಎಂಡಿಎಂಎ ಮಾದಕವಸ್ತು ಪತ್ತೆಯಾಗಿದೆ. ಆಕೆ ಕೆಲ ಸಮಯದಿಂದಲೂ ಮಾದಕವಸ್ತು ಬಳಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಟಿಗೆ ನಿಷೇಧಿತ ಮಾದಕವಸ್ತುವನ್ನು ಪೂರೈಕೆ ಮಾಡಿದವರ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ನಟ ಶ್ರೀನಾಥ್ ಭಾಸಿ ಹಾಗೂ ನಟಿ ಪ್ರಯಾಗಾ ಮಾರ್ಟಿನ್‌ರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.
ಉದಯನಿಧಿ ಟಿ-ಶರ್ಟ್ ಧರಿಸುವ ವಿರುದ್ಧ ಹೈಕೋರ್ಟ್‌ಗೆ ಮೊರೆ
ಚೆನ್ನೈ: ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರು ಟಿ-ಶರ್ಟ್, ಜೀನ್ಸ್ ಧರಿಸಿ ಸರ್ಕಾರದ ವಸ್ತ್ರಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಮದ್ರಾಸ್ ಕೈಕೋರ್ಟ್‌ಗೆ ದೂರು ಸಲ್ಲಿಸಿರುವ ವಕೀಲರೊಬ್ಬರು, ಅವರಿಗೆ 2019ರ ಸರ್ಕಾರಿ ಆದೇಶಾನುಸಾರ ಔಪಚಾರಿಕ ವಸ್ತ್ರಸಂಹಿತೆಯನ್ನು ಅನುಸರಿಸಲು ನಿರ್ದೇಶಿಸುವಂತೆ ಕೋರಿದ್ದಾರೆ.ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಉದಯನಿಧಿ ಧರಿಸುವ ಟಿ-ಶರ್ಟ್, ಜೀನ್ಸ್, ಪಾದರಕ್ಷೆಯನ್ನು ವಸ್ತ್ರಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಿ ಎಂದು ವಕೀಲ ಎಂ. ಸತ್ಯ ಕುಮಾರ್ ಮನವಿ ಮಾಡಿದ್ದಾರೆ.
‘ಸರ್ಕಾರಿ ಕಾರ್ಯಕ್ರಮಗಳಲ್ಲಿ ಡಿಎಂಕೆ ಪಕ್ಷದ ಚಿಹ್ನೆಗಳ ಪ್ರದರ್ಶನ ಅಸಂವಿಧಾನಿಕ ಹಾಗೂ ಅಕ್ರಮ. ರಾಜಕೀಯ ಮತ್ತು ಸರ್ಕಾರಿ ಕರ್ತವ್ಯಗಳ ನಡುವಿನ ಅಂತರವನ್ನು ಅರಿತು, ವಸ್ತ್ರ ಸಂಹಿತೆಯನ್ನು ಅನುಸರಿಸಲು ಅವರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.ತಾವು ಆಧುನಿಕತೆ ಮತ್ತು ತಮಿಳು ಸಂಸ್ಕೃತಿಯ ಪರ ಎಂದು ಬಿಂಬಿಸಲು ಡಿಎಂಕೆಯ ಕೆಲ ನಾಯಕರು ಟಿ-ಶರ್ಟ್ ಹಾಗೂ ಧೋತಿ ಧರಿಸುತ್ತಿದ್ದುದನ್ನೂ ವಕೀಲರು ಇಲ್ಲಿ ಸ್ಮರಿಸಿದ್ದಾರೆ.