ಸಾರಾಂಶ
ಪಾಕಿಸ್ತಾನಕ್ಕೆ ಪಾಠ ಕಲಿಸುವ ಸಲುವಾಗಿ ಅದರೊಂದಿಗೆ 1960ರಲ್ಲಿ ಏರ್ಪಟ್ಟಿದ್ದ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತಿನಲ್ಲಿ ಇಟ್ಟಿರುವ ಕೇಂದ್ರ ಸರ್ಕಾರ, ಇದರಿಂದ ತನಗೆ ಲಭ್ಯವಾಗುವ ಹೆಚ್ಚಿನ ನೀರನ್ನು ಚಿನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ರಣಬೀರ್ ಕಾಲುವೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ
ನವದೆಹಲಿ: ಪಾಕಿಸ್ತಾನಕ್ಕೆ ಪಾಠ ಕಲಿಸುವ ಸಲುವಾಗಿ ಅದರೊಂದಿಗೆ 1960ರಲ್ಲಿ ಏರ್ಪಟ್ಟಿದ್ದ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತಿನಲ್ಲಿ ಇಟ್ಟಿರುವ ಕೇಂದ್ರ ಸರ್ಕಾರ, ಇದರಿಂದ ತನಗೆ ಲಭ್ಯವಾಗುವ ಹೆಚ್ಚಿನ ನೀರನ್ನು ಚಿನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ರಣಬೀರ್ ಕಾಲುವೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಒಪ್ಪಂದದ ಪ್ರಕಾರ, ಭಾರತವು ಸಿಂಧೂ ನದಿಯ ಉಪನದಿಗಳ ನೀರನ್ನು ಸೀಮಿತವಾಗಿ ಬಳಸುತ್ತಿದ್ದು, ಉಳಿದದ್ದನ್ನು ಪಾಕಿಸ್ತಾನಕ್ಕೆ ಹರಿಬಿಡಬೇಕಾಗಿತ್ತು. ಜತೆಗೆ, ಆ ಬಗೆಗಿನ ಮಾಹಿತಿಯನ್ನು ಕಾಲಕಾಲಕ್ಕೆ ಪಾಕ್ ಜತೆ ಹಂಚಿಕೊಳ್ಳಬೇಕಿತ್ತು. ಆದರೆ ಒಪ್ಪಂದ ತಡೆಹಿಡಿಯಲಾಗಿರುವ ಕಾರಣ, ಇದ್ಯಾವುದರ ಅವಶ್ಯಕತೆಯೂ ಇಲ್ಲ.
ಈ ಮೊದಲು ಕೇವಲ ನೀರಾವರಿಗೆ ಬಳಕೆಯಾಗುತ್ತಿದ್ದ ಚಿನಾಬ್ ನೀರನ್ನು ಈಗ ಅನ್ಯ ಅವಶ್ಯಕತೆಗಳಿಗೆ ಬಳಸಿಕೊಳ್ಳಬಹುದು. ಹೀಗಿರುವಾಗ, ‘ಆ ನದಿಯಿಂದ ಜಲವಿದ್ಯುತ್ ಉತ್ಪಾದನೆಯನ್ನು 3000 ಮೆ.ವ್ಯಾ.ಗೆ ಹೆಚ್ಚಿಸುವ ಯೋಜನೆ ಸರ್ಕಾರ ಹಾಕಿಕೊಂಡಿದೆ. ಜತೆಗೆ, ಪ್ರಸ್ತುತ 60 ಕಿ.ಮೀ. ಉದ್ದವಿರುವ ರಣಬೀರ್ ಕಾಲುವೆಯನ್ನು 120 ಕಿ.ಮೀ.ವರೆಗೆ ವಿಸ್ತರಿಸುವ ಯೋಜನೆಯೂ ಇದ್ದು, ಕೆಲಸವನ್ನು ಬೇಗ ಮುಗಿಸುವಂತೆ ಸೂಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತ್ತ ಕಥುವಾ, ರಾವಿ, ಪರಾಗ್ವಾಲ್ ಕಾಲುವೆಗಳಲ್ಲಿ ಹೂಳು ತೆಗೆಯುವ ಕೆಲಸವೂ ಶುರುವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ಅವುಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಲಿದ್ದು, ಕೃಷಿ, ವಿದ್ಯುತ್ ಉತ್ಪಾದನೆಗೆ ಅಧಿಕ ನೀರು ಸಿಗಲಿದೆ.