ಸಾರಾಂಶ
ನವದೆಹಲಿ: ಕಳೆದ ವಾರದಿಂದ ವಿಮಾನಯಾನ ಕಂಪನಿಗಳಿಗೆ ಭಾರೀ ಸಂಖ್ಯೆಯಲ್ಲಿ ಹುಸಿ ಬಾಂಬ್ ಸಂದೇಶಗಳು ರವಾನೆಯಾಗುತ್ತಿದ್ದರೂ ಕ್ರಮ ಕೈಗೊಳ್ಳದ ಎಕ್ಸ್ ಹಾಗೂ ಇನ್ನಿತರ ಸೋಷಿಯಲ್ ಮೀಡಿಯಾಗಳಿಗೆ ಮತ್ತೆ ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, ಕೂಡಲೇ ಇಂಥ ಹುಸಿ ಸಂದೇಶಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ.
ಅಲ್ಲದೆ ಮೂರನೇ ವ್ಯಕ್ತಿಗಳು ಹಾಕಿದ ಇಂಥ ಪೋಸ್ಟ್‌ಗಳ ಬಗ್ಗೆ ಜಾಲತಾಣಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ವಿನಾಯ್ತಿ ಇದೆಯಾದರೂ, ಅದು ಕಾನೂನು ಬಾಹಿರ ಚಟುವಟಿಕೆ ತಡೆಯಲು ಯಾವುದೇ ಕ್ರಮಕೈಗೊಳ್ಳದೇ ಹೋದರೆ ಅನ್ವಯವಾಗದು ಎಂದು ಎಚ್ಚರಿಸಿದೆ.
ಈ ಕುರಿತು ಎಲ್ಲಾ ಜಾಲತಾಣಗಳಿಗೂ ಸಲಹಾವಳಿ ರವಾನಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ‘ಇಂಥ ಹುಸಿ ಬಾಂಬ್ ಬೆದರಿಕೆ ಕರೆಗಳಿಂದಾಗಿ ಭದ್ರತಾ ಸಂಸ್ಥೆಗಳು ತೊಂದರೆಗೆ ಒಳಗಾಗಿದ್ದು ಮಾತ್ರವಲ್ಲದೇ, ವಿಮಾನಗಳ ಸಾಮಾನ್ಯ ಸಂಚಾರದ ಮೇಲೂ ಪರಿಣಾಮ ಬೀರಿದೆ. ಇಂಥ ಹುಸಿ ಕರೆಗಳು ದೊಡ್ಡಮಟ್ಟದಲ್ಲಿ ಗ್ರಾಹಕರಿಗೆ ತೊಂದರೆ ಮಾಡುತ್ತಿರುವುದರ ಜೊತೆಗೆ ದೇಶದ ಅರ್ಥ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ.
ಇದರ ಜೊತೆಗೆ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಇಂಥ ಬೆದರಿಕೆ ಸಂದೇಶಗಳನ್ನು ಫಾರ್ವರ್ಡ್, ರೀಶೇರ್, ರೀಪೋಸ್ಟ್, ರೀಟ್ವೀಟ್ ಮಾಡುವ ಅವಕಾಶ ಹಾಗೆಯೇ ಉಳಿಸಿರುವುದರಿಂದ ಕರೆಗಳ ಪ್ರಮಾಣ ಗಂಭೀರ ಪ್ರಮಾಣಕ್ಕೆ ತಲುಪಿದೆ. ಹೀಗಾಗಿ ಕೂಡಲೇ ಇಂಥ ಬೆದರಿಕೆ ಸಂದೇಶ ತೆಗೆದು ಹಾಕಬೇಕು’ ಎಂದು ಸರ್ಕಾರ ಸೂಚಿಸಿದೆ.
ಇತ್ತೀಚೆಗೆ ಜಾಲತಾಣಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದ ಕೇಂದ್ರ ಸರ್ಕಾರ, ‘ಹುಸಿ ಬಾಂಬ್ ಸಂದೇಶ ತಡೆಗೆ ನೀವು ಏನು ಕ್ರಮ ಕೈಗೊಂಡಿದ್ದೀರಿ? ನಿಮ್ಮ ನಡೆ ‘ಅಪರಾಧವನ್ನು ಬೆಂಬಲಿಸುವುದಕ್ಕೆ ಸಮ.’ ನಿಮ್ಮ ವೇದಿಕೆಯನ್ನು ಬಳಸಿ ಕಿಡಿಗೇಡಿಗಳು ರವಾನಿಸುತ್ತಿರುವ ಸಂದೇಶಗಳಿಂದ ಏರ್‌ಲೈನ್ಸ್ ಹಾಗೂ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಯ ತೀವ್ರತೆ ಅರಿವಿದೆಯೇ’ ಎಂದು ತೀವ್ರವಾಗಿ ತರಾಟೆ ತೆಗೆದುಕೊಂಡಿತ್ತು. ಆದರೂ ಜಾಲತಾಣದಲ್ಲಿ ಇಂಥ ಕರೆಗಳು ನಿಲ್ಲದೇ ಹೋಗಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೊಂದು ಸುತ್ತಿನಲ್ಲಿ ಅವುಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
ಮತ್ತೆ 33 ವಿಮಾನಗಳಿಗೆ ಬಾಂಬ್ ಬೆದರಿಕೆ
ನವದೆಹಲಿ: ದೇಶದಲ್ಲಿ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಯಂತಹ ಘಟನೆ ಮುಂದುವರೆದಿದೆ. ಶನಿವಾರ ಮತ್ತೆ 33 ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದ್ದು, ಕಳೆದ 13 ದಿನಗಳಲ್ಲಿ 300ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಂತಾಗಿದೆ.ಮೂಲಗಳ ಪ್ರಕಾರ, ಶನಿವಾರ ಇಂಡಿಗೋ, ಏರಿಂಡಿಯಾ ಮತ್ತು ವಿಸ್ತಾರದ ತಲಾ 11 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಜಾಲತಾಣಗಳ ಮೂಲಕವೇ ಹೆಚ್ಚಿನ ಬೆದರಿಕೆ ಸಂದೇಶಗಳು ಬಂದಿರುವ ಹಿನ್ನೆಲೆ ಐಟಿ ಸಚಿವಾಲಯ ಇಂತಹ ತಪ್ಪು ಸಂದೇಶಗಳನ್ನು ತೆಗೆದುಹಾಕುವಂತೆ ಅಥವಾ ನಿಷ್ಕ್ರಿಯಗೊಳಿಸುವಂತೆ ಸೋಶಿಯಲ್ ಮೀಡಿಯಾಗಳಿಗೆ ಸೂಚಿಸಿದೆ.
ತಿರುಪತಿ ಹೋಟೆಲ್‌ಗಳಿಗೆ ಮತ್ತೆ ಬಾಂಬ್ ಬೆದರಿಕೆ
ತಿರುಪತಿ: ವಿಮಾನಗಳಿಗೆ ಬಾಂಬ್ ಬೆದರಿಕೆ ಒಡ್ಡಲಾಗುತ್ತಿರುವ ನಡುವೆ ತಿರುಪತಿಯ ಕೆಲ ಹೋಟೆಲ್‌ಗಳಿಗೆ ಸತತ 2ನೇ ದಿನವಾದ ಶನಿವಾರವೂ ಇ-ಮೇಲ್ ಮೂಲಕ ಬೆದರಿಕೆ ಸಂದೇಶಗಳನ್ನು ರವಾನಿಸಲಾಗಿದೆ.ತಿರುಪತಿ ಜಿಲ್ಲಾ ಪೊಲೀಸ್ ವಿಭಾಗವು ರಾಜ್ ಪಾರ್ಕ್, ಪೈ ವೈಸ್‌ರಾಯ್ ಸೇರಿದಂತೆ ನಗರದ ಕೆಲ ಹೋಟೆಲ್‌ಗಳಲ್ಲಿ ಶನಿವಾರ ಶೋಧಕಾರ್ಯ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಇವರಿಗೆ ಸಾಥ್ ನೀಡಿದ್ದು, ಹೋಟೆಲ್‌ನ ಪ್ರತಿ ಕೋಣೆ, ಪಾರ್ಕಿಂಗ್ ಪ್ರದೇಶ, ಜನರೇಟರ್ ಕೋಣೆಗಳಲ್ಲಿ ಶೋಧ ನಡೆಸಲಾಯಿತು. ಬಳಿಕ ಇದು ಹುಸಿ ಬೆದರಿಕೆ ಎಂದು ದೃಢಪಟ್ಟಿತು.
ಸಂದೇಶದಲ್ಲಿ ತಮಿಳುನಾಡಿನ ಸ್ಥಳೀಯ ರಾಜಕಾರಣದ ಬಗ್ಗೆ ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ.
ರಾಜಕೋಟ್‌ನಲ್ಲೂ 10 ಹೋಟೆಲ್‌ಗೆ ಧಮಕಿ:
ಗುಜರಾತ್‌ನ ರಾಜಕೋಟ್‌ನ 10 ಹೋಟೆಲ್‌ಗಳಿಗೂ ಇ-ಮೇಲ್ ಮೂಲಕ ಶನಿವಾರ ಬೆದರಿಕೆ ಬಂದಿದೆ. ಆದರೆ ಇದು ಹುಸಿ ಬೆದರಿಕೆ ಎಂದು ತಪಾಸಣೆ ಬಳಿಕ ದೃಢಪಟ್ಟಿದೆ.