ಇಂದು ಆಂಧ್ರ ಸಿಎಂ ಆಗಿ ಚಂದ್ರಬಾಬು ಪ್ರಮಾಣ

| Published : Jun 12 2024, 12:32 AM IST

ಇಂದು ಆಂಧ್ರ ಸಿಎಂ ಆಗಿ ಚಂದ್ರಬಾಬು ಪ್ರಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ತೆಲುಗು ದೇಶಂ ಪಕ್ಷದ ನೇತಾರ ಚಂದ್ರಬಾಬು ನಾಯ್ಡು ಬುಧವಾರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಮರಾವತಿ: ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ತೆಲುಗು ದೇಶಂ ಪಕ್ಷದ ನೇತಾರ ಚಂದ್ರಬಾಬು ನಾಯ್ಡು ಬುಧವಾರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮರಾವತಿ ಬಳಿಯ ಕೇಸರಪಳ್ಳಿ ಐಟಿ ಪಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯ್ಡು ಮತ್ತು ಅವರ ಇತರೆ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯಾಗಿ ಎನ್‌ಡಿಎ ನಾಯಕರು ಭಾಗಿಯಾಗಲಿದ್ದಾರೆ.ಚಂದ್ರಬಾಬು ನಾಯ್ಡು 1995ರಲ್ಲಿ ಮೊದಲ ಬಾರಿಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಈ ವೇಳೆ ಹೈದರಾಬಾದ್‌ ನಗರವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿಸಿದ್ದರು. ಸತತ 2 ಬಾರಿಗೆ ಅಧಿಕಾರ ನಡೆಸಿದ ಬಳಿಕ 2004ರಲ್ಲಿ ಸೋಲುಂಡ ನಾಯ್ಡು, 2014ರಲ್ಲಿ ಆಂಧ್ರ ವಿಭಜನೆಯಾದ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆಗ ತಮ್ಮ ಕನಸಿನ ರಾಜಧಾನಿಯಾಗಿ ಅಮರಾವತಿಯನ್ನು ನಿರ್ಮಿಸುವ ಕಾರ್ಯ ಕೈಗೊಂಡರು. ಆದರೆ 2019ರಲ್ಲಿ ಪರಾಭವಗೊಳ್ಳಬೇಕಾಯಿತು. ಈಗ ಮತ್ತೊಮ್ಮೆ 2024ರಲ್ಲಿ ಆಯ್ಕೆಯಾಗುವ ಮೂಲಕ ಆಂಧ್ರಪ್ರದೇಶವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಕ್ಕೇರಿಸುವ ಗುರಿಯ ಜೊತೆಗೆ ಬಡವರ ಏಳಿಗೆಗಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಸೂಪರ್‌-6 ಯೋಜನೆ ಜಾರಿ ಮಾಡಬೇಕಾದ ಸವಾಲು ಹೊಂದಿದ್ದಾರೆ.

ಜನಸೇನಾ, ಬಿಜೆಪಿ ಸಹಕಾರ: 2024ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಸ್ವತಂತ್ರವಾಗಿ ಅಧಿಕಾರ ರಚಿಸುವಷ್ಟು ಸ್ಪಷ್ಟ ಬಹುಮತ ಗಳಿಸಿದ್ದರೂ(134), ಚುನಾವಣಾಪೂರ್ವ ಮೈತ್ರಿಯಂತೆ ಜನಸೇನಾ ಪಕ್ಷ ಹಾಗೂ ಬಿಜೆಪಿಯೂ ಸರ್ಕಾರದ ಭಾಗವಾಗಿದ್ದಾರೆ. ಒಟ್ಟಾರೆ ಎನ್‌ಡಿಎ ಮೈತ್ರಿಕೂಟ 164 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಪ್ರತಿಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಕೇವಲ 11 ಸ್ಥಾನಗಳಿಗೆ ಸೀಮಿತವಾಗಿದೆ.

==

ಪವನ್‌ ಕಲ್ಯಾಣ್‌ಗೆ ಡಿಸಿಎಂ ಪಟ್ಟ?

ಅಮರಾವತಿ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಮುಖ್ಯಪಾತ್ರ ನಿರ್ವಹಿಸಿದ ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ನಟ ಪವನ್‌ ಕಲ್ಯಾಣ್‌ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಸಂಪುಟದಲ್ಲಿ ಜನಸೇನಾದ ಇಬ್ಬರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ.

==

ಆಂಧ್ರಕ್ಕೆ ಅಮರಾವತಿಯೊಂದೇ ರಾಜಧಾನಿ: ನಾಯ್ಡು

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವ ಮುನ್ನಾದಿನ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅಮರಾವತಿ ನಗರ ಮಾತ್ರ ಆಂಧ್ರಪ್ರದೇಶದ ರಾಜಧಾನಿಯಾಗಿರಲಿದೆ ಎಂದು ಘೋಷಿಸಿದ್ದಾರೆ.ಎನ್‌ಡಿಎ ಮೈತ್ರಿ ಸಭೆಯಲ್ಲಿ ಪ್ರಕಟಿಸಿದ ನಾಯ್ಡು, ‘ನಮ್ಮ ಸರ್ಕಾರದಲ್ಲಿ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಮಾಡುವ ಕುರಿತು ಯಾವುದೇ ಪ್ರಸ್ತಾವ ಹಾಗೂ ಗೊಂದಲವಿಲ್ಲ. ಆಂಧ್ರಪ್ರದೇಶಕ್ಕೆ ಅಮರಾವತಿ ಏಕಮಾತ್ರ ರಾಜಧಾನಿಯಾಗಿರಲಿದೆ’ ಎಂದು ತಿಳಿಸಿದರು.2014ರಲ್ಲಿ ನಾಯ್ಡು ಅಮರಾವತಿ ರಾಜಧಾನಿ ಮಾಡುವ ಯೋಜನೆಗೆ ಚಾಲನೆ ನೀಡಿದ್ದರು. ಆದರೆ 2019ರ ಚುನಾವಣೆಯಲ್ಲಿ ನಾಯ್ಡು ಸೋತ ಬಳಿಕ ಯೋಜನೆ ರದ್ದು ಮಾಡಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಪ್ರತ್ಯೇಕ 3 ರಾಜಧಾನಿ ಮಾಡಲು ಮುಂದಾಗಿದ್ದರು. ಆದರೆ ಇದೀಗ ನಾಯ್ಡು ಮತ್ತೆ ಗೆದ್ದಿರುವ ಹಿನ್ನೆಲೆಯಲ್ಲಿ ಹಳೆ ಯೋಜನೆಗೆ ಮತ್ತೆ ಜೀವ ಬಂದಿದೆ.