ಸಾರಾಂಶ
ಅಮರಾವತಿತೆಲುಗುದೇಶಂ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ಚಿತ್ರನಟರಾದ ರಜನೀಕಾಂತ್, ಚಿರಂಜೀವಿ ಸಮ್ಮುಖ ನಡೆದ ಈ ಶಪಥಗ್ರಹಣ ಸಮಾರಂಭದಲ್ಲಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹಾಗೂ ನಾಯ್ಡು ಪುತ್ರ ನಾರಾ ಲೋಕೇಶ್ ಅವರೂ ಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡರು. ಇದರೊಂದಿಗೆ ಪವನ್ ಕಲ್ಯಾಣ್ ಅವರು ಉಪಮುಖ್ಯಮಂತ್ರಿಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಆಂಧ್ರಪ್ರದೇಶ ರಾಜ್ಯಪಾಲ, ಕರ್ನಾಟಕ ಮೂಲದ ಎಸ್.ಅಬ್ದುಲ್ ನಜೀರ್ ಅವರು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ಮೋದಿ ಅವರು ನಾಯ್ಡು ಅವರನ್ನು ಆಲಿಂಗಿಸಿದರು. ಬಳಿಕ ತೆಲುಗು ಮೆಗಾಸ್ಟಾರ್ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಸೋದರರ ಕೈ ಹಿಡಿದು ಮೇಲೆತ್ತಿ ಹುರಿದುಂಬಿಸಿದರು. ರಜನೀಕಾಂತ್ ದಂಪತಿ ಜತೆಗೂ ಇದೇ ವೇಳೆ ಕುಶಲೋಪರಿ ನಡೆಸಿದರು.
175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸಿಎಂ ಸೇರಿ 26 ಮಂದಿ ಸಚಿವರಾಗಬಹುದು. ಒಂದು ಸ್ಥಾನ ಖಾಲಿಬಿಟ್ಟು ಉಳಿದ ಎಲ್ಲ ಹುದ್ದೆ ಭರ್ತಿ ಮಾಡಲಾಗಿದೆ. ಪವನ್ ಕಲ್ಯಾಣ್‌ರ ಜನಸೇನಾ ಪಕ್ಷಕ್ಕೆ ಮೂರು, ಬಿಜೆಪಿಗೆ 1 ಸ್ಥಾನ ದೊರೆತಿದೆ. ಪವನ್ ಹಾಗೂ ಲೋಕೇಶ್ ಇಬ್ಬರೂ ಶಾಸಕರಾಗಿ ಚುನಾಯಿತರಾಗಿದ್ದಾರೆ.
ಇತ್ತೀಚೆಗೆ ನಡೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ತೆಲುಗುದೇಶಂ, ಬಿಜೆಪಿ, ಜನಸೇನಾ ಮಿತ್ರಕೂಟ 164 ಸ್ಥಾನಗಳನ್ನು ಗೆದ್ದಿತ್ತು. 25 ಲೋಕಸಭಾ ಕ್ಷೇತ್ರಗಳ ಪೈಕಿ 21ರಲ್ಲಿ ಜಯಭೇರಿ ಬಾರಿಸಿತ್ತು.