ಸಾರಾಂಶ
ಮರಳಿ ಮುಖ್ಯಮಂತ್ರಿ ಆಗುವವರೆಗೂ ವಿಧಾನಸೌಧ ಪ್ರವೇಶಿಸುವುದಿಲ್ಲ ಎಂದು 3 ವರ್ಷಗಳ ಹಿಂದೆ ಶಪಥ ಮಾಡಿದ್ದ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು, ಆಡಿದ ಮಾತಿನಂತೆ ಮುಖ್ಯಮಂತ್ರಿಯಾಗಿ ಶುಕ್ರವಾರ ಆಂಧ್ರಪ್ರದೇಶ ವಿಧಾನಸಭೆ ಪ್ರವೇಶಿಸಿದ್ದಾರೆ.
ಅಮರಾವತಿ: ಮರಳಿ ಮುಖ್ಯಮಂತ್ರಿ ಆಗುವವರೆಗೂ ವಿಧಾನಸೌಧ ಪ್ರವೇಶಿಸುವುದಿಲ್ಲ ಎಂದು 3 ವರ್ಷಗಳ ಹಿಂದೆ ಶಪಥ ಮಾಡಿದ್ದ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು, ಆಡಿದ ಮಾತಿನಂತೆ ಮುಖ್ಯಮಂತ್ರಿಯಾಗಿ ಶುಕ್ರವಾರ ಆಂಧ್ರಪ್ರದೇಶ ವಿಧಾನಸಭೆ ಪ್ರವೇಶಿಸಿದ್ದಾರೆ.
ಈ ಮೂಲಕ 31 ತಿಂಗಳ ಹಿಂದೆ ವೈಎಸ್‌ಆರ್ ಕಾಂಗ್ರೆಸ್ ನಾಯಕರಿಗೆ ಹಾಕಿದ್ದ ಶಪಥವನ್ನು ಪೂರೈಸಿದ್ದಾರೆ.
2021ರ ನ.19ರಂದು ವಿಧಾನಸಭಾ ಕಲಾಪದ ವೇಳೆ ವೈಎಸ್‌ಆರ್ ಕಾಂಗ್ರೆಸ್ ನಾಯಕರು ನಾಯ್ಡು ಅವರ ಪತ್ನಿ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದರು. ಇದರಿಂದ ಆಕ್ರೋಶಗೊಂಡು ಕಣ್ಣೀರಿಟ್ಟಿದ್ದ ನಾಯ್ಡು, ‘ಈ ವಿಧಾನಸಭೆ ಕೌರವರ ಸಭೆಯಂತಿದೆ. ನಾನು ಈ ವಿಧಾನಸಭೆ ಬಹಿಷ್ಕರಿಸಿ ಹೋಗುತ್ತಿದ್ದೇನೆ. ಮುಂದೆ ಇಲ್ಲಿಗೆ ಮುಖ್ಯಮಂತ್ರಿಯಾಗಿಯೇ ಮರಳುವೆ’ ಎಂಬ ಶಪಥ ತೊಟ್ಟಿದ್ದರು.
ಅದರಂತೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮರಳಿ ಅಧಿಕಾರ ಪಡೆದುಕೊಂಡಿರುವ ಚಂದ್ರಬಾಬು ನಾಯ್ಡು, ಶುಕ್ರವಾರ ಮುಖ್ಯಮಂತ್ರಿಯಾಗಿ ವಿಧಾನಸಭೆ ಆವರಣ ಪ್ರವೇಶಿಸಿದರು. 175 ಸದಸ್ಯರಿರುವ ವಿಧಾನಸಭೆಯಲ್ಲಿ ಟಿಡಿಪಿ 135 ಸ್ಥಾನಗಳನ್ನು ಗೆದ್ದಿದ್ದು, ಅದರ ಮಿತ್ರಪಕ್ಷಗಳಾದ ಜನ ಸೇನಾ ಮತ್ತು ಬಿಜೆಪಿ ತಲಾ 21 ಹಾಗೂ 8 ಸ್ಥಾನಗಳನ್ನು ಪಡೆದಿವೆ.