ಜಾಗತಿಕ ಒಳಿತಿಗೆ ಯೋಗ ಪ್ರಬಲ ಅಸ್ತ್ರ: ಮೋದಿ

| Published : Jun 22 2024, 12:54 AM IST / Updated: Jun 22 2024, 04:34 AM IST

ಸಾರಾಂಶ

‘ನಾನಾ ದೇಶಗಳು ಇಂದು ಜಾಗತಿಕ ಒಳಿತಿಗೆ ಯೋಗವನ್ನು ಒಂದು ಪ್ರಬಲ ಅಸ್ತ್ರವಾಗಿ ನೋಡುತ್ತಿವೆ. ಯೋಗವನ್ನು ನಾವು ಕೇವಲ ಆಧ್ಯಾತ್ಮಿಕ ವಿಷಯವಾಗಿ ನೋಡದೆ ಇದನ್ನು ವಿಜ್ಞಾನವಾಗಿ ಪರಿಗಣಿಸಿದರೆ ವೈಯಕ್ತಿಕವಾಗಿಯೂ ನಮಗೆ ಸಾಕಷ್ಟು ಲಾಭವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಶ್ರೀನಗರ :  ‘ನಾನಾ ದೇಶಗಳು ಇಂದು ಜಾಗತಿಕ ಒಳಿತಿಗೆ ಯೋಗವನ್ನು ಒಂದು ಪ್ರಬಲ ಅಸ್ತ್ರವಾಗಿ ನೋಡುತ್ತಿವೆ. ಯೋಗವನ್ನು ನಾವು ಕೇವಲ ಆಧ್ಯಾತ್ಮಿಕ ವಿಷಯವಾಗಿ ನೋಡದೆ ಇದನ್ನು ವಿಜ್ಞಾನವಾಗಿ ಪರಿಗಣಿಸಿದರೆ ವೈಯಕ್ತಿಕವಾಗಿಯೂ ನಮಗೆ ಸಾಕಷ್ಟು ಲಾಭವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕಾಶ್ಮೀರದ ಶ್ರೀನಗರದಲ್ಲಿ ಯೋಗಾಸನ ಮಾಡುವ ಮೂಲಕ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಯೋಗ ಕೇವಲ ಆಧ್ಯಾತ್ಮಿಕ ಜ್ಞಾನವಲ್ಲ. ಇದೊಂದು ವಿಜ್ಞಾನ. ಜನರು ಯೋಗದ ಬಗ್ಗೆ ಮಾತನಾಡುವಾಗ ಅಲ್ಲಾ, ಈಶ್ವರ, ದೇವರು... ಹೀಗೆ ಆಧ್ಯಾತ್ಮಿಕತೆಯ ಬಗ್ಗೆಯೇ ಮಾತನಾಡುತ್ತಾರೆ. ಆಧ್ಯಾತ್ಮಿಕ ಅನುಭೂತಿಯನ್ನು ಬೇಕಾದರೆ ಕೆಲ ಕಾಲ ಬದಿಗಿಡಿ. ಅದನ್ನು ಯಾವಾಗ ಬೇಕಾದರೂ ಪಡೆಯಬಹುದು. ಸದ್ಯಕ್ಕೆ ಯೋಗವನ್ನು ವೈಯಕ್ತಿಕ ಆರೋಗ್ಯದ ಮಾರ್ಗವಾಗಿ ನೋಡಿ. ಇದು ಪ್ರತಿಯೊಬ್ಬರ ಜೀವನವನ್ನೂ ಸುಧಾರಿಸುತ್ತದೆ. ಜನರ ಜೀವನ ಸುಧಾರಿಸಿದರೆ ಜಗತ್ತೇ ಸುಧಾರಿಸುತ್ತದೆ. ಹೀಗಾಗಿ ಜಗತ್ತು ಇಂದು ಯೋಗವನ್ನು ಜಾಗತಿಕ ಒಳಿತಿನ ಅಸ್ತ್ರವಾಗಿ ನೋಡುತ್ತಿದೆ’ ಎಂದು ಹೇಳಿದರು.

ಮಳೆಯಿಂದಾಗಿ ಯೋಗ ಸ್ಥಳಾಂತರ:

ಕಾಶ್ಮೀರದ ಪ್ರಸಿದ್ಧ ದಾಲ್‌ ಸರೋವರದ ದಡದಲ್ಲಿರುವ ಶೇರ್‌-ಇ-ಕಾಶ್ಮೀರ್‌ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ ಎದುರು ತೆರೆದ ಸ್ಥಳದಲ್ಲಿ ಯೋಗಾಸನ ಕಾರ್ಯಕ್ರಮ ಏರ್ಪಾಟಾಗಿತ್ತು. ಆದರೆ, ಮಳೆಯ ಕಾರಣ ಕಾರ್ಯಕ್ರಮವನ್ನು ಸಭಾಂಗಣದ ಒಳಗೆ ನಡೆಸಲಾಯಿತು. ಅಲ್ಲೇ ಮೋದಿ ಯೋಗಾಸನ ಮಾಡಿ, ಜನರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳು ಹಾಗೂ ಜನರು ಮೋದಿ ಜೊತೆ ಸೆಲ್ಫಿಗೆ ಮುಗಿಬಿದ್ದರು. ಮೋದಿ ಕೂಡ ಖುಷಿಯಿಂದ ಸೆಲ್ಫಿಗಳಿಗೆ ಪೋಸ್‌ ನೀಡಿ, ಬಳಿಕ ಫೋಟೋಗಳನ್ನು ಟ್ವೀಟ್‌ ಕೂಡ ಮಾಡಿದರು.

ವಿದೇಶಿಗರ ದಿನಚರಿಯಲ್ಲಿ ಯೋಗ:

ಕಳೆದುಹೋದ ಸಂಗತಿಗಳ ಬ್ಯಾಗೇಜ್‌ಗಳ ಹೊರೆಯಿಲ್ಲದೆ ವರ್ತಮಾನದಲ್ಲಿ ಬದುಕಲು ಯೋಗ ನಮಗೆ ಸಹಾಯ ಮಾಡುತ್ತದೆ. ಹಾಗೆ ನಮ್ಮೊಳಗೆ ಶಾಂತಿ ಮೂಡಿದರೆ ಜಗತ್ತಿನ ಮೇಲೆ ಧನಾತ್ಮಕ ಪ್ರಭಾವ ಬೀರಲು ಸಾಧ್ಯ. ಈ ರೀತಿಯಲ್ಲಿ ಯೋಗ ಇಂದು ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತಿದೆ. ಜಗತ್ತಿನಾದ್ಯಂತ ಪ್ರತಿದಿನ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ವಿದೇಶಗಳಲ್ಲೂ ಜನರು ಯೋಗವನ್ನು ತಮ್ಮ ದಿನಚರಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ನಾನು ಎಲ್ಲಿಗೇ ಹೋದರೂ ಜಾಗತಿಕ ನಾಯಕರು ನನ್ನ ಜೊತೆ ಯೋಗದ ಬಗ್ಗೆ ಮಾತನಾಡುತ್ತಾರೆ. ತುರ್ಕ್‌ಮೆನಿಸ್ತಾನ, ಸೌದಿ ಅರೇಬಿಯಾ, ಮಂಗೋಲಿಯಾ, ಜರ್ಮನಿ ಹೀಗೆ ನಾನಾ ದೇಶಗಳಲ್ಲಿ ಜನರು ದಿನನಿತ್ಯ ಯೋಗ ಮಾಡತೊಡಗಿದ್ದಾರೆ ಎಂದು ಮೋದಿ ಹೇಳಿದರು.ಯೋಗ ಪ್ರವಾಸೋದ್ಯಮ:

ಇಂದು ಜಗತ್ತಿನ ನಾನಾ ಭಾಗಗಳಿಂದ ಯೋಗವನ್ನು ನಿಖರವಾಗಿ ಕಲಿಯಲು ಜನರು ಭಾರತಕ್ಕೆ ಬರುತ್ತಿದ್ದಾರೆ. ಉತ್ತರಾಖಂಡ ಹಾಗೂ ಕೇರಳದಲ್ಲಿ ಯೋಗ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದೆ. ಜನರು ಫಿಟ್ನೆಸ್‌ಗಾಗಿ ವೈಯಕ್ತಿಕ ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಕಾರ್ಪೊರೇಟ್‌ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಯೋಗ ತರಬೇತಿ ಕೊಡಿಸುತ್ತಿವೆ. ಅಂತರಿಕ್ಷದಲ್ಲಿ ಕೆಲಸ ಮಾಡುವ ಬಾಹ್ಯಾಕಾಶ ವಿಜ್ಞಾನಿಗಳು ಕೂಡ ತಾಳ್ಮೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಯೋಗ ಮಾಡುತ್ತಿದ್ದಾರೆ. ಹೀಗೆ ಇದು ಸಾಕಷ್ಟು ಜನರಿಗೆ ಉದ್ಯೋಗಾವಕಾಶಗಳನ್ನೂ, ಆದಾಯವನ್ನೂ ತಂದುಕೊಡುತ್ತಿದೆ ಎಂದು ಮೋದಿ ಹೇಳಿದರು.

ಕಾಶ್ಮೀರಕ್ಕೆ ಯೋಗ ವರದಾನ:

ಜಮ್ಮು ಮತ್ತು ಕಾಶ್ಮೀರದಲ್ಲೂ ಯೋಗ ಸಾಕಷ್ಟು ಜನಪ್ರಿಯವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯುವ ಶಕ್ತಿ ಯೋಗಕ್ಕಿದೆ. ಅದು ಇಲ್ಲಿನ ಜನರಿಗೆ ಹೊಸ ಉದ್ಯೋಗಾವಕಾಶ ಹಾಗೂ ಆದಾಯದ ಮೂಲಗಳನ್ನು ಸೃಷ್ಟಿಸಲಿದೆ ಎಂದು ಮೋದಿ ತಿಳಿಸಿದರು.

ಇತ್ತೀಚೆಗೆ ನಾನು ಈಜಿಪ್ಟ್‌ನ ವಿಡಿಯೋವೊಂದನ್ನು ನೋಡಿದೆ. ಅವರು ಪಿರಮಿಡ್‌ಗಳ ಎದುರು ಯೋಗ ಸ್ಪರ್ಧೆ ಏರ್ಪಡಿಸಿ, ಅತ್ಯುತ್ತಮ ಫೋಟೋಗಳಿಗೆ ಬಹುಮಾನ ನೀಡುತ್ತಿದ್ದಾರೆ. ಕಾಶ್ಮೀರದಲ್ಲೂ ಅದನ್ನು ಮಾಡಬಹುದು. ಆಗ ಇಲ್ಲಿನ ಪ್ರವಾಸಿ ತಾಣಗಳಿಗೆ ಇನ್ನಷ್ಟು ಪ್ರಚಾರ ಸಿಗುತ್ತದೆ ಎಂದು ಹೇಳಿದರು.