ಜಾಮೀನು ಸಿಕ್ಕರೂ ಕೇಜ್ರಿಗೆ ಜೈಲೇ ಗತಿ

| Published : Jun 22 2024, 12:50 AM IST / Updated: Jun 22 2024, 04:36 AM IST

ಸಾರಾಂಶ

ದೆಹಲಿಯ ಅಬಕಾರಿ ಹಗರಣದಲ್ಲಿ ಜೈಲು ಸೇರಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸ್ಥಳೀಯ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ಶುಕ್ರವಾರ ಹೈಕೋರ್ಟ್‌ ತಡೆಹಿಡಿದಿದೆ.

 ನವದೆಹಲಿ : ದೆಹಲಿಯ ಅಬಕಾರಿ ಹಗರಣದಲ್ಲಿ ಜೈಲು ಸೇರಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸ್ಥಳೀಯ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ಶುಕ್ರವಾರ ಹೈಕೋರ್ಟ್‌ ತಡೆಹಿಡಿದಿದೆ. ಅದರೊಂದಿಗೆ, ಗುರುವಾರ ಜಾಮೀನು ಲಭಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ದೆಹಲಿ ಮುಖ್ಯಮಂತ್ರಿಗೆ ತೀವ್ರ ಹಿನ್ನಡೆಯಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸ್ಥಳೀಯ ಕೋರ್ಟ್‌ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ಆದೇಶವನ್ನು ತಡೆಹಿಡಿದು ಕೇಜ್ರಿವಾಲ್‌ಗೆ ನೋಟಿಸ್‌ ಜಾರಿಗೊಳಿಸಿತು.

ಜಾಮೀನು ವಿರೋಧಿಸಿದ ಇ.ಡಿ. ವಿರುದ್ಧ ಕೇಜ್ರಿವಾಲ್‌ ಪತ್ನಿ ಸುನೀತಾ ಆಕ್ರೋಶ ವ್ಯಕ್ತಪಡಿಸಿದ್ದು, ‘ಇ.ಡಿ.ಯವರು ಕೇಜ್ರಿವಾಲ್‌ರನ್ನು ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕನಂತೆ ನೋಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

 2-3 ದಿನದಲ್ಲಿ ನಿರ್ಧಾರ:

ಜಾಮೀನಿಗೆ ತಡೆ ನೀಡಬೇಕೆಂದು ಇ.ಡಿ. ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 2-3 ದಿನದಲ್ಲಿ ಪೂರ್ಣಗೊಳಿಸಿ ಆದೇಶ ನೀಡುವುದಾಗಿ ಹೈಕೋರ್ಟ್‌ ಪೀಠ ಹೇಳಿದೆ. ಅಲ್ಲಿಯವರೆಗೂ ಸ್ಥಳೀಯ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ಅಮಾನತಿನಲ್ಲಿರಲಿದೆ. ಹೀಗಾಗಿ ಕೇಜ್ರಿವಾಲ್‌ ಸದ್ಯಕ್ಕೆ ಜೈಲಿನಲ್ಲೇ ಇರಬೇಕಾಗುತ್ತದೆ.