ಸಾರಾಂಶ
‘ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಪತ್ತೆ’ ವಿವಾದಕ್ಕೆ ಸಂಬಂಧಿಸಿದಂತೆ ತಾವು ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭೇಟಿ ನೀಡುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ತಮ್ಮ ಭೇಟಿಯನ್ನು ದಿಢೀರ್ ರದ್ದುಪಡಿಸಿದ್ದಾರೆ.
ಅಮರಾವತಿ: ‘ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಪತ್ತೆ’ ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತಾರ್ಥವಾಗಿ ತಾವು ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭೇಟಿ ನೀಡುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ತಮ್ಮ ಭೇಟಿಯನ್ನು ದಿಢೀರ್ ರದ್ದುಪಡಿಸಿದ್ದಾರೆ.
ಶನಿವಾರ ಜಗನ್ ತಿರುಪತಿಗೆ ತೆರಳಬೇಕಿತ್ತು. ಆದರೆ, ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ನನ್ನ ತಿರುಪತಿ ಭೇಟಿಗೆ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಮಂಡಳಿ ಅನುಮತಿ ನೀಡಿಲ್ಲ. ಈ ಬಗ್ಗೆ ನನಗೆ ನೋಟಿಸ್ ನೀಡಿದೆ.
ನನ್ನ ಜತೆ ಭಾಗಿ ಆಗಬಾರದು ಎಂದೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ನೋಟಿಸ್ ನೀಡಲಾಗಿದೆ. ಹೀಗಾಗಿ ತಿಮ್ಮಪ್ಪನ ದೇಗುಲಕ್ಕೆ ಭೇಟಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದೇನೆ’ ಎಂದು ಹೇಳಿದರು.
ಜಗನ್ ತಿರುಪತಿ ದೇಗುಲಕ್ಕೆ ಭೇಟಿ ನೀಡುವ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಜಗನ್ ಕ್ರಿಶ್ಚಿಯನ್ ಆಗಿರುವ ಕಾರಣ, ಅವರು ದೇಗುಲಕ್ಕೆ ಭೇಟಿ ನೀಡುವುದಕ್ಕೂ ಮೊದಲು ಅಲ್ಲಿ ವಿದೇಶೀಯರು ಮತ್ತು ಅನ್ಯಧರ್ಮೀಯರಿಗೆ ಇರುವ ನಿಯಮದಂತೆ ‘ನಾನು ತಿಮ್ಮಪ್ಪನ ಭಕ್ತ’ ಎಂದು ಘೋಷಿಸಬೇಕೆಂದು ಬಿಜೆಪಿ ಮತ್ತು ಟಿಡಿಪಿ ಆಗ್ರಹಿಸಿದ್ದವು. ಜಗನ್ ಅವಧಿಯಲ್ಲೇ ಲಡ್ಡುಗೆ ಪ್ರಾಣಿಜನ್ಯ ಕೊಬ್ಬು ಬೆರೆಸಲಾಗುತ್ತಿತ್ತು ಎಂಬ ಆರೋಪ ಬಂದಿದ್ದ ಕಾರಣದಿಂದಲೂ ಅವರ ಭೇಟಿ ವಿವಾದಕ್ಕೆ ಕಾರಣವಾಗಿತ್ತು.
ಕ್ರೈಸ್ತನಾದರೂ ನಾನು ಸರ್ವಧರ್ಮ ಸಹಿಷ್ಣು:
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗನ್, ‘ನನ್ನ ಧರ್ಮದ ವಿಷಯದ ಬಗ್ಗೆ ಅನಗತ್ಯ ಪ್ರಸ್ತಾಪ ಮಾಡಲಾಗುತ್ತಿದೆ. ನನ್ನ ಧರ್ಮ ಏನೆಂದು ಇಡೀ ದೇಶಕ್ಕೇ ಗೊತ್ತು. ನಾನು 4 ಗೋಡೆ ಮಧ್ಯೆ ಬೈಬಲ್ ಓದುವೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿ ಎಲ್ಲ ಧರ್ಮ ಗೌರವಿಸುವೆ.‘ನಾನು ಅಧಿಕಾರದಲ್ಲಿದ್ದಾಗ ಅನೇಕ ಸಲ ತಿರುಮಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ. ರೇಷ್ಮೆ ವಸ್ತ್ರ ಸಮರ್ಪಿಸಿದ್ದೇನೆ. ಈಗ ನನ್ನ ಭೇಟಿಗೆ ಅಡ್ಡಿ ಮಾಡಲೆಂದೇ ಧರ್ಮದ ವಿಷಯ ಪ್ರಸ್ತಾಪ ಮಾಡಲಾಗುತ್ತಿದೆ. ಲಡ್ಡು ವಿಷಯದಲ್ಲಿ ಆದ ವೈಫಲ್ಯದ ಗಮನವನ್ನು ಬೇರೆಡೆ ತಿರುಗಿಸುತ್ತಿದ್ದಾರೆ’ ಎಂದು ಆಪಾದಿಸಿದರು.
‘ನನ್ನ ಅವಧಿಯಲ್ಲಿ ಲಡ್ಡುವಿನಲ್ಲಿ ಕಲಬೆರಕೆ ಆಗಿಲ್ಲ. ಗುಣಮಟ್ಟದ ಇಲ್ಲದ ತುಪ್ಪವನ್ನು ತಿರಸ್ಕರಿಸಲಾಗಿತ್ತು. ಆದರೆ 100 ದಿನದ ಆಡಳಿತದಲ್ಲಿ ನಾಯ್ಡು ವಿಫಲರಾಗಿ, ಅದನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಲಡ್ಡು ಅಕ್ರಮ ಆರೋಪ ಹೊರಿಸುತ್ತಿದ್ದಾರೆ’ ಎಂದು ದೂರಿದರು.
‘ನನ್ನ ತಿರುಮಲ ಭೇಟಿ ವೇಳೆ ಅಲ್ಲಿಗೆ ಹೋಗದಂತೆ ನನ್ನ ಕಾಯಕರ್ತರಿಗೆ ನೋಟಿಸ್ ಬರುತ್ತಿವೆ. ಹೊರರಾಜ್ಯದವರು ಬಂದು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ತಿರುಮಲದಲ್ಲಿ ಸಾವಿರಾರು ಪೊಲೀಸರನ್ನು ಹಾಕಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ’ ಎಂದು ಜಗನ್ ಆರೋಪಿಸಿದರು.
ಟಿಡಿಪಿ ನಕಾರ:
ಆದರೆ, ಜಗನ್ ಭೇಟಿಗೆ ಅನುಮತಿ ನಿರಾಕರಿಸಲಾಗಿದೆ ಎಂಬ ಆರೋಪವನ್ನು ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷ (ಟಿಡಿಪಿ) ಅಲ್ಲಗಳೆದಿದೆ.
ದೇಗುಲ ಪ್ರವೇಶಕ್ಕೆ ತಡೆ ಮಾಡಿಲ್ಲ: ಜಗನ್‌ಗೆ ನಾಯ್ಡು ತಿರುಗೇಟು
ಅಮರಾವತಿ: ತಿರುಪತಿ ದೇಗುಲಕ್ಕೆ ಭೇಟಿ ನೀಡದಂತೆ ತಮಗೆ ಮತ್ತು ಇತರೆ ದೇಗುಲಗಳಿಗೆ ಭೇಟಿ ನೀಡದಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಟಿಡಿಪಿ ಸರ್ಕಾರ ನೋಟಿಸ್ ನೀಡಿದೆ ಎಂಬ ಮಾಜಿ ಸಿಎಂ ಜಗನ್ ಆರೋಪವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಳ್ಳಿಹಾಕಿದ್ದಾರೆ. ಅಂಥದ್ದೊಂದು ನೋಟಿಸ್ ಅನ್ನು ಯಾರಾದರೂ ನೀಡಿದ್ದರೆ ಅದನ್ನು ತೋರಿಸಲಿ ಎಂದು ನಾಯ್ಡು ಸವಾಲು ಹಾಕಿದ್ದಾರೆ.
ಜಗನ್ ತಮ್ಮ ಶನಿವಾರದ ತಿರುಪತಿ ದೇಗುಲ ಭೇಟಿ ರದ್ದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ನಾಯ್ಡು, ‘ಸಾರ್ವಜನಿಕ ಜೀವನದಲ್ಲಿ ಇರುವವರು ಸಂಪ್ರದಾಯ ಪಾಲನೆ ಮಾಡಬೇಕು ಮತ್ತು ಏನನ್ನು ಮಾಡಬೇಕೋ ಅದನ್ನು ಮಾಡಬೇಕು. ಪ್ರತಿ ಧರ್ಮ ತನ್ನದೇ ಆದ ಸಂಪ್ರದಾಯ ಹೊಂದಿದೆ. ನೀವು ಅಲ್ಲಿ ಪ್ರಾರ್ಥನೆಗೆ ತೆರಳುತ್ತೀರಿ ಎಂದಾದಲ್ಲಿ ಅಲ್ಲಿನ ಸಂಪ್ರದಾಯ ಗೌರವಿಸಬೇಕು.
ನಂಬಿಕೆ ಮತ್ತು ಸಂಪ್ರದಾಯಕ್ಕಿಂತ ಯಾರೂ ದೊಡ್ಡವರಲ್ಲ. ಭಕ್ತರ ನಂಬಿಕೆ ಮತ್ತು ದೇವರ ಸಂಪ್ರದಾಯಗಳಿಗೆ ಯಾರೂ ಅಪಚಾರ ಎಸಗಬಾರದು. ಇವೆರಡಕ್ಕೂ ಅವಮಾನ ಆಗುವಂತೆ ನೀವು ನಡೆದುಕೊಳ್ಳಲಾಗದು’ ಎಂದು ಟಾಂಗ್ ನೀಡಿದ್ದಾರೆ.
ತಿರುಪತಿ ತಿರುಮಲ ದೇಗುಲದ ಸಂಪ್ರದಾಯದ ಅನ್ವಯ, ಅಲ್ಲಿಗೆ ಭೇಟಿ ನೀಡುವ ಹಿಂದುಯೇತರರು ತಮ್ಮ ಧರ್ಮ ಘೋಷಣೆ ಮಾಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ದೇಗುಲ ಭೇಟಿಗೂ ಮುನ್ನ್ಗಜಗನ್ ತಮ್ಮ ಧರ್ಮ ಘೋಷಣೆ ಮಾಡಬೇಕು ಎಂದು ಬಿಜೆಪಿ ಸವಾಲು ಹಾಕಿತ್ತು. ಹೀಗಾಗಿ ಇಂಥ ಘೋಷಣೆಗೆ ಹೆದರಿ ನಾಯ್ಡು ಭೇಟಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬರ್ಥದಲ್ಲಿ ಜಗನ್‌ಗೆ ನಾಯ್ಡು ಟಾಂಗ್ ನೀಡಿದ್ದಾರೆ.
ಪುರಿ ಜಗನ್ನಾಥ ದೇವಸ್ಥಾನದ ಪ್ರಸಾದ ಪರೀಕ್ಷೆ
ಭುವನೇಶ್ವರ್: ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಪತ್ತೆಯಾದ ಬೆನ್ನಲ್ಲೇ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದ ಹಾಗೂ ಬಳಕೆಯಾಗುವ ತುಪ್ಪವನ್ನು ಪರೀಕ್ಷೆಗೆ ಒಳಪಡಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ.ಈ ಬಗ್ಗೆ ಮಾಹಿತಿ ನೀಡಿರುವ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್, ‘ಪ್ರಸಾದದಲ್ಲಿ ಬಳಕೆಯಾಗುವ ಎಲ್ಲಾ ಪದಾರ್ಥಗಳ ಪರೀಕ್ಷೆಗೆ ಆಹಾರ ನಿರೀಕ್ಷಕರನ್ನು ನಿಯೋಜಿಸಲಾಗುವುದು. ಇವರು ಅಡುಗೆ ಕೋಣೆಗೆ ಹೋಗುವ ವಸ್ತುಗಳನ್ನು ಮತ್ತು ನೈವೇದ್ಯವನ್ನು ಪರೀಕ್ಷಿಸುತ್ತಾರೆ’ ಎಂದರು.
ಇದುವರೆಗೆ ಪ್ರಸಾದದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲವಾದರೂ, ಮುಂಜಾಗ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಿರುಪತಿ ಲಡ್ಡು ವಿವಾದ ತನಿಖೆಗೆ 9 ಸದಸ್ಯರ ಎಸ್‌ಐಟಿ ರಚನೆ
ಅಮರಾವತಿ: ತಿರುಮಲ ದೇವಸ್ಥಾನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಬಳಕೆ ವಿವಾದದ ತನಿಖೆಗಾಗಿ ಆಂಧ್ರ ಪ್ರದೇಶ ಸರ್ಕಾರ 9 ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ಗುಂಟೂರು ಪೊಲೀಸ್ ಮಹಾನಿರೀಕ್ಷಕ ಸರ್ವಶ್ರೇಷ್ಠ ತ್ರಿಪಾಠಿ ಇದರ ನೇತೃತ್ವ ವಹಿಸಲಿದ್ದಾರೆ.ಲಡ್ಡು ವಿವಾದ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದರು. ಹೀಗಾಗಿ ತಿರುಪತಿಯ ಪಾವಿತ್ರ್ಯತೆ ಕಾಪಾಡಲು ಎಸ್‌ಐಟಿ ತನಿಖೆ ನಡೆಉಸುವದಾಗಿ ಸೆ.22ರಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದರು. ಅದರಂತೆ ಈಗ ಎಸ್ಐಟಿ ರಚನೆ ಆಗಿದೆ.