ಪಿಂಚಣಿದಾರರು ಯಾವುದೇ ರಾಜ್ಯದ, ಯಾವುದೇ ಬ್ಯಾಂಕಿನ, ಯಾವುದೇ ಶಾಖೆಯಿಂದ ಹಣ ಪಡೆಯಬಹುದಾದ ಯೋಜನೆ

| Published : Jan 04 2025, 12:32 AM IST / Updated: Jan 04 2025, 04:51 AM IST

ಪಿಂಚಣಿದಾರರು ಯಾವುದೇ ರಾಜ್ಯದ, ಯಾವುದೇ ಬ್ಯಾಂಕಿನ, ಯಾವುದೇ ಶಾಖೆಯಿಂದ ಹಣ ಪಡೆಯಬಹುದಾದ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಿಂಚಣಿದಾರರು ದೇಶದ ಯಾವುದೇ ರಾಜ್ಯದ, ಯಾವುದೇ ಬ್ಯಾಂಕಿನ, ಯಾವುದೇ ಶಾಖೆಯಿಂದ ತಮ್ಮ ಪಿಂಚಣಿ ಹಣ ಪಡೆಯಬಹುದಾದ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.

ನವದೆಹಲಿ: ಪಿಂಚಣಿದಾರರು ದೇಶದ ಯಾವುದೇ ರಾಜ್ಯದ, ಯಾವುದೇ ಬ್ಯಾಂಕಿನ, ಯಾವುದೇ ಶಾಖೆಯಿಂದ ತಮ್ಮ ಪಿಂಚಣಿ ಹಣ ಪಡೆಯಬಹುದಾದ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇಂಥ ಯೋಜನೆ ಜಾರಿಗೆ ಅಗತ್ಯವಾದ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ದೇಶದ ಎಲ್ಲಾ ವಲಯಗಳಲ್ಲೂ ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಕೇಂದ್ರದ ಕಾರ್ಮಿಕ ಸಚಿವಾಲಯ ಪ್ರಕಟಿಸಿದೆ.

 ಇದರಿಂದ ಇಪಿಎಫ್‌ಒ ವ್ಯಾಪ್ತಿಗೆ ಬರುವ 68 ಲಕ್ಷ ಪಿಂಚಣಿದಾರರಿಗೆ ಭಾರೀ ಲಾಭವಾಗಲಿದೆ.ಏನೇನು ಬದಲಾವಣೆ?:ಹೊಸ ವ್ಯವಸ್ಥೆಯಡಿ ಪಿಂಚಣಿ ಜಾರಿಯಾಗುತ್ತಲೇ, ಪಿಂಚಣಿದಾರರು ಪರಿಶೀಲನೆಗಾಗಿ ಇನ್ನು ಬ್ಯಾಂಕ್‌ ಶಾಖೆಗೆ ಹೋಗುವ ಅವಶ್ಯಕತೆ ಇಲ್ಲ. ಮೊದಲ ಪಿಂಚಣಿ ಮೊತ್ತ ಬಿಡುಗಡೆಯಾಗುತ್ತಿದ್ದಂತೆ ಅದು ಬ್ಯಾಂಕ್‌ ಖಾತೆಯಲ್ಲಿ ಜಮೆಯಾಗಲಿದೆ. 

ಒಂದು ವೇಳೆ ಪಿಂಚಣಿದಾರರು ಒಂದು ಪ್ರದೇಶದಿಂದ ಇನ್ನೊಂದು ಕಡೆ ಹೋಗಿ ನೆಲೆಸಿದರೂ, ತಮ್ಮ ಬ್ಯಾಂಕ್‌ನ ಬ್ರಾಂಚ್‌ ಬದಲಿಸುವ ಅವಶ್ಯಕತೆ ಇರುವುದಿಲ್ಲ. ಅದರ ಬದಲಾಗಿ ದೇಶದ ಯಾವುದೇ ರಾಜ್ಯದ, ಯಾವುದೇ ಬ್ಯಾಂಕ್‌ನ, ಯಾವುದೇ ಶಾಖೆಯಿಂದ ಬೇಕಾದರೂ ಗ್ರಾಹಕರು ಹಣ ಪಡೆದುಕೊಳ್ಳಬಹುದು.

ಈಮೊದಲು ಹೇಗಿತ್ತು?:ಇದಕ್ಕೂ ಮೊದಲು ಜಾರಿಯಲ್ಲಿದ್ದ 1995ರ ಪಿಂಚಣಿ ಯೋಜನೆಯ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಪ್ರತಿ ಝೋನ್‌ ಅಥವಾ ಪ್ರಾಂತ್ಯದ ಇಪಿಎಫ್‌ಒ ಕಚೇರಿಗಳು 3-4 ಬ್ಯಾಂಕುಗಳೊಂದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದ್ದು, ಅವುಗಳ ಮೂಲಕವೇ ಪಿಂಚಣಿ ಹಣ ಪಡೆಯಬೇಕಾಗಿತ್ತು.

ಬರಲಿದೆ ಪ್ರತ್ಯೇಕ ಆಪ್‌, ಎಟಿಎಂ ಕಾರ್ಡ್

ಕಾರ್ಮಿಕರ ಭವಿಷ್ಯ ನಿಧಿ ಹೂಡಿಕೆದಾರರಿಗೆ ಇನ್ನಷ್ಟು ಸುಗಮ ಸೇವೆ ನೀಡುವ ನಿಟ್ಟಿನಲ್ಲಿ ಹೊಸ ಸಾಫ್ಟ್‌ವೇರ್‌, ಮೊಬೈಲ್‌ ಆ್ಯಪ್‌ ಮತ್ತು ಎಟಿಎಂ ಕಾರ್ಡ್‌ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಆ್ಯಪ್‌ ಮತ್ತು ಎಟಿಎಂ ಕಾರ್ಡ್‌ ಮುಂದಿನ ಮೇ- ಜೂನ್‌ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಇಪಿಎಫ್‌ಎಫ್‌ ಗ್ರಾಹಕರಿಗೆ ಬ್ಯಾಂಕ್ ರೀತಿಯ ಸೌಲಭ್ಯ ಒದಗಿಸಲಿದೆ.

ಈ ಆ್ಯಪ್‌ ಮೂಲಕ ಗ್ರಾಹಕರು ತಮ್ಮೆಲ್ಲಾ ಭವಿಷ್ಯ ನಿಧಿ ಖಾತೆಯ ಮಾಹಿತಿಯನ್ನು ಅಂಗೈನಲ್ಲೇ ಪಡೆಯಬಹುದಾಗಿದೆ. ಜೊತೆಗೆ ಸೇವೆಯಲ್ಲಿರುವ ನೌಕರರು ಅನಿವಾರ್ಯ ಸಂದರ್ಭದಲ್ಲಿ ಭವಿಷ್ಯ ನಿಧಿ ಹೂಡಿಕೆ ಹಣ ಹಿಂಪಡೆಯಬೇಕಾಗಿ ಬಂದರೆ ಅವರು ಹಿಂಪಡೆಯಬಹುದಾದ ಹಣದ ಮೊತ್ತ ಸೇರಿದಂತೆ ಎಲ್ಲಾ ಮಾಹಿತಿಯನ್ನೂ ಹೊಸ ಸಾಫ್ಟ್‌ವೇರ್‌ ಸುಲಭವಾಗಿ ಲೆಕ್ಕಾಚಾರ ಮಾಡಿ ನೀಡಲಿದೆ. ಹೀಗಾಗಿ ಸಣ್ಣಪುಟ್ಟ ಮೊತ್ತ ಹಿಂಪಡೆಯಬೇಕಾದಾಗ ಇಪಿಎಫ್‌ಒ ಕಚೇರಿಗೆ ಅಲೆಯಬೇಕಾದ ಪ್ರಸಂಗ ಬರುವುದಿಲ್ಲ. ಜೊತೆಗೆ ಇಪಿಎಫ್‌ಒ ವಿತರಿಸುವ ಎಟಿಎಂ ಕಾರ್ಡ್ ಬಳಸಿಕೊಂಡು ಯಾವುದೇ ಬ್ಯಾಂಕ್‌ನಿಂದ ಭವಿಷ್ಯ ನಿಧಿ ಹಣಕ್ಕೆ ಹಿಂದಕ್ಕೆ ಪಡೆಯಬಹುದು.