ಕೇಬಲ್‌ ಡ್ರೋನ್‌ ಬಳಸಿ ಇಸ್ರೇಲ್‌ ಮೇಲೆ ದಾಳಿ

ಇದನ್ನು ಜಾಮ್‌ ಮಾಡೋದು ಅಸಾಧ್ಯ

ತಂತ್ರಜ್ಞಾನ ಚತುರ ಇಸ್ರೇಲ್‌ಗೇ ಆಘಾತ

ಟೆಲ್‌ ಅವಿವ್‌/ಬೈರೂತ್: ಆಧುನಿಕ ಯುದ್ಧಕಲೆಯ ಪರಿಣಿತ, ತಂತ್ರಜ್ಞಾನ ಚತುರ ಎನಿಸಿಕೊಂಡಿರುವ ಇಸ್ರೇಲ್‌ನ ವಾಯುರಕ್ಷಣಾ ವ್ಯವಸ್ಥೆಗಳಿಗೇ ಚಳ್ಳೆಹಣ್ಣು ತಿನ್ನಿಸಿ ಒಳನುಗ್ಗಿ ಹಾನಿಯುಂಟುಮಾಡುವ ಕೇಬಲ್‌ ಡ್ರೋನ್‌ಗಳ ಬಳಕೆಯನ್ನು ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಆರಂಭಿಸಿದ್ದಾರೆ.


ಭಾನುವಾರ ಇವುಗಳನ್ನು ಬಳಸಿ ಓರ್ವ ಇಸ್ರೇಲಿ ಸೈನಿಕನನ್ನು ಬಲಿ ಪಡೆಯಲಾಗಿದ್ದು, ಬಳಿಕ ರಕ್ಷಣೆಗೆಂದು ಬಂದ ಹೆಲಿಕಾಪ್ಟರ್‌ಗಳ ಮೇಲೆಯೂ ಹಲವು ಡ್ರೋನ್‌ಗಳು ಹಾರಿಸಲಾಯಿತು. ಇದರ ವಿಡಿಯೋವನ್ನು ಹಿಜ್ಬುಲ್ಲಾ ಹಂಚಿಕೊಂಡಿದೆ. ಸಾಂಪ್ರದಾಯಿಕ ಡ್ರೋನ್‌ಗಳಂತೆ ಈ ಡ್ರೋನ್‌ ಅನ್ನು ಜಾಮ್‌ ಮಾಡುವುದು ಅಸಾಧ್ಯ. ಹೀಗಾಗಿಯೇ ಇದು ಇಸ್ರೇಲ್‌ಗೆ ಸವಾಲಾಗಿದೆ.

ಯಾಕೆ ಜಾಮ್‌ ಮಾಡಲಾಗದು?:

ಸಾಮಾನ್ಯವಾಗಿ ರೇಡಿಯೋ ಸಿಗ್ನಲ್‌ಗಳ ಸಹಾಯದಿಂದ ಡ್ರೋನ್‌ಗಳನ್ನು ನಿಯಂತ್ರಿಸಲಾಗುತ್ತದೆ. ಸಿಗ್ನಲ್‌ಗಳನ್ನು ಜಾಮ್‌ ಮಾಡುವ ಮೂಲಕ ಅವುಗಳ ದಾರಿ ತಪ್ಪಿಸುವುದು ಸಾಧ್ಯ. ಆದರೆ ಹಿಜ್ಬುಲ್ಲಾ ಬಳಸುತ್ತಿರುವ ಡ್ರೋನ್‌ಗಳು ರೇಡಿಯೋ ಸಿಗ್ನಲ್‌ಅನ್ನು ಅವಲಂಬಿಸಿರದೆ, ಎಲೆಕ್ಟ್ರಾನಿಕ್‌ ಸಂಕೇತಗಳನ್ನೂ ಹೊರಸೂಸುವುದಿಲ್ಲ. ಬದಲಿಗೆ ಇವುಗಳು 15 ಕಿ.ಮೀ.ನಷ್ಟು ಉದ್ದದ ಕೇಬಲ್‌ ವೈರ್‌ಗಳಿಂದ ನಿಯಂತ್ರಕರ ಸಂಪರ್ಕದಲ್ಲಿರುತ್ತವೆ. ಜತೆಗೆ ಈ ವೈರ್‌ಗಳು ಬರಿಗಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತವೆ. ಆದ್ದರಿಂದ ಈ ಡ್ರೋನ್‌ಗಳು ಬರುತ್ತಿರುವುದು ಎಲ್ಲಿಂದ ಎಂದು ತಿಳಿಯಲು ಹಾಗೂ ಜಾಮ್‌ ಮಾಡುವುದು ಅಸಾಧ್ಯ. ಆದ್ದರಿಂದಲೇ ಇವುಗಳ ಮುಂದೆ ಇಸ್ರೇಲ್‌ನ ವಾಯುರಕ್ಷಣಾ ವ್ಯವಸ್ಥೆ ನಿರುಪಯುಕ್ತವಾಗಿ, ದಾಳಿಗೆ ತೆರೆದುಕೊಂಡಿದೆ. ಈ ಹಿಂದೆ ಇಂತಹ ಡ್ರೋನ್‌ಗಳನ್ನು ಉಕ್ರೇನ್‌ ವಿರುದ್ಧ ರಷ್ಯಾ ಬಳಸಿತ್ತು.