ನಾಡಿದ್ದು ಸಂಸತ್‌ ಭವನದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧರಿತ ‘ಛಾವಾ’ ವೀಕ್ಷಿಸಲಿರುವ ಮೋದಿ

| N/A | Published : Mar 25 2025, 12:48 AM IST / Updated: Mar 25 2025, 04:19 AM IST

ಸಾರಾಂಶ

ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧರಿತ ಚಲನಚಿತ್ರ ‘ಛಾವಾ’ವನ್ನು ಮಾ.27ರಂದು ಸಂಸತ್ತಿನ ಬಾಲಯೋಗಿ ಸಭಾಂಗಣದಲ್ಲಿ ಸಂಸದರಿಗಾಗಿ ಪ್ರದರ್ಶಿಸುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ಸಂಸದರು ಚಿತ್ರ ವೀಕ್ಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ನವದೆಹಲಿ: ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧರಿತ ಚಲನಚಿತ್ರ ‘ಛಾವಾ’ವನ್ನು ಮಾ.27ರಂದು ಸಂಸತ್ತಿನ ಬಾಲಯೋಗಿ ಸಭಾಂಗಣದಲ್ಲಿ ಸಂಸದರಿಗಾಗಿ ಪ್ರದರ್ಶಿಸುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ಸಂಸದರು ಚಿತ್ರ ವೀಕ್ಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಸಂಭಾಜಿ ಮಹಾರಾಜರ ಪಾತ್ರದಲ್ಲಿ ಮಿಂಚಿದ ನಟ ವಿಕ್ಕಿ ಕೌಶಲ್ ಸೇರಿದಂತೆ ಚಿತ್ರದ ಸಂಪೂರ್ಣ ಪಾತ್ರವರ್ಗ ಮತ್ತು ಸಿಬ್ಬಂದಿಗಳು ಪ್ರದರ್ಶನಕ್ಕೆ ಹಾಜರಾಗುವ ನಿರೀಕ್ಷೆಯಿದೆ.

ಈ ಹಿಂದೆ ಪ್ರಧಾನಿ ಮೋದಿ ಛಾವಾ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅದರ ಬೆನ್ನಲ್ಲೆ ಸಂಸತ್ತಿನಲ್ಲಿ ಚಿತ್ರ ಪ್ರದರ್ಶನ ಏರ್ಪಟ್ಟಿದೆ.

ಸೆನ್ಸೆಕ್ಸ್ 1078 ಅಂಕ ಜಿಗಿತ: 6 ವಾರದ ಗರಿಷ್ಠ

ಮುಂಬೈ: ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ 6ನೇ ದಿನವೂ ಏರಿಕೆ ಕಂಡಿದ್ದು, ಸೆನ್ಸೆಕ್ಸ್ ಸೋಮವಾರ 1078 ಅಂಕ ಜಿಗಿತ ಕಂಡರೆ, ನಿಫ್ಟಿ 307 ಅಂಕ ಏರಿಕೆಯಾಗಿದೆ. ಈ ಮೂಲಕ ಷೇರುಪೇಟೆ 6 ವಾರದ ಗರಿಷ್ಠ ಅಂಕ ದಾಖಲಿಸಿದೆ ಹಾಗೂ ಹೂಡಿಕೆದಾರರು ಒಂದೇ ದಿನ 27 ಲಕ್ಷ ಕೋಟಿ ರು.ನಷ್ಟು ಶ್ರೀಮಂತರಾಗಿದ್ದಾರೆ

ಸೆನ್ಸೆಕ್ಸ್‌ 1078 ಅಂಕಗಳ ಏರಿಕೆಯೊಂದಿಗೆ 77, 984ರಲ್ಲಿ ಮುಕ್ತಾಯಗೊಂಡಿದ್ದರೆ, ನಿಫ್ಟಿ 307 ಅಂಕಗಳ ಏರಿಕೆಯೊಂದಿಗೆ 23,708ರಲ್ಲಿ ಅಂತ್ಯವಾಯಿತು. ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಪ್ರವೃತ್ತಿಯು ದೇಶಿಯ ಮಾರುಕಟ್ಟೆಯಲ್ಲಿನ ಈ ಬೆಳವಣಿಗೆಗೆ ಕಾರಣ, ಕಳೆದ 6 ದಿನಗಳಲ್ಲಿ ಸೆನ್ಸೆಕ್ಸ್ 4100 ಅಂಕಗಳ ಏರಿಕೆ ಕಂಡಿದ್ದರೆ, ನಿಫ್ಟಿ 1260 ಅಂಕ ಜಿಗಿತವಾಗಿದೆ.

ಟ್ರಂಪ್‌ ಮಾಜಿ ಸೊಸೆ ಜತೆ ಗಾಲ್ಫರ್‌ ಟೈಗರ್‌ವುಡ್ಸ್‌ ಲವ್‌!

ಲಾಸ್‌ ಏಂಜಲೀಸ್‌: ಅಮೆರಿಕದ ಗಾಲ್ಫರ್‌ ಟೈಗರ್‌ವುಡ್ಸ್ ತಾವು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಾಜಿ ಸೊಸೆ ವನೆಸ್ಸಾ ಟ್ರಂಪ್‌ ಜೊತೆಗೆ ಪ್ರೇಮ ಸಂಬಂಧದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವನೆಸ್ಸಾ ಜೊತೆಗಿನ ತಮ್ಮ ಫೋಟೋವನ್ನು ಹಂಚಿಕೊಂಡು, ‘ಪ್ರೀತಿಯು ಗಾಳಿಯಲ್ಲಿದೆ. ನನ್ನ ಪಕ್ಕದಲ್ಲಿ ನೀವಿದ್ದಾಗ ಅದು ಉತ್ತಮವಾಗಿರುತ್ತದೆ. ಈ ಸಂದರ್ಭದಲ್ಲಿ ನಮ್ಮ ಗೌಪ್ಯತೆಯನ್ನು ಕಾಪಾಡುವಂತೆ ವಿನಂತಿಸುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ವನೆಸ್ಸಾ ಕೂಡ ವುಡ್ಸ್‌ ಜೊತೆಗಿನ ಫೋಟೋ ಹಂಚಿಕೊಂಡು ಸಂಬಂಧ ಅಧಿಕೃತಪಡಿಸಿದ್ದಾರೆ.ವನೆಸ್ಸಾ ಅವರು ಡೊನಾಲ್ಡ್‌ ಟ್ರಂಪ್‌ ಅವರ ಮೊದಲ ಪತ್ನಿ ಇವಾನ್ ಟ್ರಂಪ್ ಅವರ ಮಗ ಡೊನಾಲ್ಡ್‌ ಟ್ರಂಪ್ ಜೂನಿಯರ್‌ ಅವರ ಮಾಜಿ ಪತ್ನಿ. ಇಬ್ಬರು ಕೂಡ 2018ರಲ್ಲಿ ವಿಚ್ಛೇದನ ಪಡೆದಿದ್ದರು.

ರೈಲಲ್ಲೇ ರೇಪ್‌ ಯತ್ನ: ಜಿಗಿದು ಮಹಿಳೆ ಪಾರು

ಹೈದರಾಬಾದ್: ರೈಲಿನ ಬೋಗಿಯಲ್ಲೇ 23 ವರ್ಷದ ಯುವತಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ಆಗ ಆಕೆ ರೈಲಿನಿಂದ ಜಿಗಿದು ಬಚಾವಾಗಿದ್ದಾಳೆ. ಆದರೆ ಜಿಗಿದ ರಭಸಕ್ಕೆ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಮಾ.22ರಂದು ಕೊಂಪಲ್ಲಿ ಬಳಿ ಯುವತಿಯು ಬೋಗಿಯಲ್ಲಿ ಏಕಾಂಗಿಯಾಗಿದ್ದಾಗ ಈ ಘಟನೆ ನಡೆದಿದೆ.‘ಎಂಎಂಟಿಎಸ್ ರೈಲಿನ ಮಹಿಳಾ ಬೋಗಿಯಲ್ಲಿ ಸಿಕಂದರಾಬಾದ್‌ನಿಂದ ಮೆಡ್ಚಲ್‌ಗೆ ಯುವತಿ ಪ್ರಯಾಣಿಸುತ್ತಿದ್ದರು. ಬೋಗಿಯಲ್ಲಿದ್ದ ಇನ್ನಿಬ್ಬರು ಮಹಿಳೆಯರು ಅಲವಾಲ್ ನಿಲ್ದಾಣದಲ್ಲಿ ಇಳಿದ ಬಳಿಕ ಆಕೆ ಒಂಟಿಯಾಗಿದ್ದಳು. ಆಗ ಸುಮಾರು 25 ವರ್ಷದ ಯುವಕ ಆಕೆಯ ಬಳಿ ಬಂದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅವನಿಂದ ತಪ್ಪಿಸಿಕೊಂಡು ರೈಲಿನಿಂದ ಜಿಗಿಯುವ ವೇಳೆ ಆಕೆಯ ತಲೆ, ಗಲ್ಲ, ಬಲಗೈ ಮತ್ತು ಸೊಂಟಕ್ಕೆ ಗಾಯಗಳಾಗಿವೆ. ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

12ನೇ ಕ್ಲಾಸ್‌ ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್‌ಗೆ ಅಸ್ತು: ಸಿಬಿಎಸ್ಇ ಚಿಂತನೆ

ನವದೆಹಲಿ: 12ನೇ ಕ್ಲಾಸ್‌ ವಿದ್ಯಾರ್ಥಿಗಳಿಗೆ ಲೆಕ್ಕಶಾಸ್ತ್ರದ ಪರೀಕ್ಷೆಯಲ್ಲಿ ಸಾದಾ ಕ್ಯಾಲ್ಕುಲೇಟರ್‌ ಬಳಸಲು ಅನುಮತಿಸುವಂತೆ ಪಠ್ಯಕ್ರಮ ಸಮಿತಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಸಿಬಿಎಸ್‌ಇ ಪರಿಶೀಲಿಸುತ್ತಿದೆ.ಕ್ಯಾಲ್ಕುಲೇಟರ್‌ ಸಹಾಯದಿಂದ ಲೆಕ್ಕಗಳನ್ನು ಮಾಡುವುದರಿಂದ, ಸಮಯದ ಉಳಿತಾಯವಾಗಲಿದೆ. ಈ ಸಂಬಂಧ ಮಾರ್ಗಸೂಚಿ ಜಾರಿಗೊಳಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಬೋರ್ಡ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಪ್ರಸ್ತುತ ಸಿಬಿಎಸ್‌ಇಯ 10 ಹಾಗೂ 12ನೇ ತರಗತಿಯ ಅಂಗವಿಕಲ ವಿದ್ಯಾರ್ಥಿಗಳಿಗೆ ಮಾತ್ರ ಕ್ಯಾಲ್ಕುಲೇಟರ್‌ ಬಳಸಲು ಅವಕಾಶವಿದೆ.

‘ವಿಶ್ಲೇಷಣಾತ್ಮಕ ಹಾಗೂ ಚಿಂತನಾ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಶ್ನೆಗಳಿಗೆ ಉತ್ತಮವಾಗಿ ಉತ್ತರಿಸಲು ಮಕ್ಕಳಿಗೆ ಅನುಕೂಲವಾಗುವ ಕಾರಣ ಕ್ಯಾಲ್ಕುಲೇಟರ್‌ ಬಳಕೆಗೆ ಅನುಮತಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಧುನಿಕ ಕ್ಯಾಲ್ಕುಲೇಟರ್‌ ಬಳಕೆಯನ್ನು ತಪ್ಪಿಸಲು ಸಮಿತಿಯು ಕೆಲ ಮಾರ್ಗಸೂಚಿಗಳನ್ನು ತಯಾರಿಸಲಿದೆ’ ಎಂದು ಸಿಬಿಎಸ್‌ಇ ತಿಳಿಸಿದೆ.