ಕೆನಡಾದಲ್ಲಿ ನಿಜ್ಜರ್ ಹತ್ಯೆ ಮಾಡಿಸಿದ್ದು ಚೀನಾ?
KannadaprabhaNewsNetwork | Published : Oct 10 2023, 01:00 AM IST
ಕೆನಡಾದಲ್ಲಿ ನಿಜ್ಜರ್ ಹತ್ಯೆ ಮಾಡಿಸಿದ್ದು ಚೀನಾ?
ಸಾರಾಂಶ
ಭಾರತ ಹಾಗೂ ಕೆನಡಾ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಖಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್‌ನನ್ನು ಹತ್ಯೆ ಮಾಡಿಸಿದ್ದು ಚೀನಾ ಎಂಬ ಸ್ಫೋಟಕ ಆರೋಪವನ್ನು ಚೀನಾ ಮೂಲದ ಬ್ಲಾಗರ್ ಒಬ್ಬರು ಮಾಡಿದ್ದಾರೆ.
ಭಾರತ-ಪಾಶ್ಚಾತ್ಯ ದೇಶಗಳ ನಡುವೆ ದ್ವೇಷ ಬಿತ್ತಲು ಈ ಕೃತ್ಯ ಚೀನಾ ಮೂಲದ ಬ್ಲಾಗರ್ ಸ್ಫೋಟಕ ಮಾಹಿತಿ ನ್ಯೂಯಾರ್ಕ್: ಭಾರತ ಹಾಗೂ ಕೆನಡಾ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಖಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್‌ನನ್ನು ಹತ್ಯೆ ಮಾಡಿಸಿದ್ದು ಚೀನಾ ಎಂಬ ಸ್ಫೋಟಕ ಆರೋಪವನ್ನು ಚೀನಾ ಮೂಲದ ಬ್ಲಾಗರ್ ಒಬ್ಬರು ಮಾಡಿದ್ದಾರೆ. ಭಾರತ ಹಾಗೂ ಪಾಶ್ಚಾತ್ಯ ದೇಶಗಳ ನಡುವೆ ದ್ವೇಷ ಮೂಡಿಸಲು ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಏಜೆಂಟರು ಈ ಹತ್ಯೆ ಮಾಡಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಚೀನಾದಲ್ಲೇ ಜನಿಸಿದ, ಈಗ ಅಮೆರಿಕದಲ್ಲಿ ನೆಲೆಸಿರುವ ಜೆನ್ನಿಫರ್ ಜೆಂಗ್ ಎಂಬ ಇಂಡಿಪೆಂಡೆಂಟ್ ಬ್ಲಾಗರ್ ಈ ಕುರಿತು ವಿಡಿಯೋ ಒಂದನ್ನು ಎಕ್ಸ್‌ನಲ್ಲಿ (ಟ್ವೀಟರ್) ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ‘ಭಾರತ ಹಾಗೂ ಪಾಶ್ಚಾತ್ಯ ದೇಶಗಳ ನಡುವೆ ಒಡಕು ಮೂಡಿಸಲು ಚೀನಾದ ಕಮ್ಯುನಿಸ್ಟ್ ಪಕ್ಷದ ಏಜೆಂಟರು ಕೆನಡಾದಲ್ಲಿ ಈ ಹತ್ಯೆ ಮಾಡಿಸಿದ್ದಾರೆ. ಅದರ ಬಗ್ಗೆ ನನಗೆ ಕಮ್ಯುನಿಸ್ಟ್ ಪಾರ್ಟಿಯ ಮೂಲಗಳಿಂದಲೇ ಮಾಹಿತಿ ಲಭಿಸಿದೆ. ತೈವಾನ್ ವಿಷಯದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇರಿಸುತ್ತಿರುವ ನಡೆಗಳನ್ನು ವಿರೋಧಿಸುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳ ಗಮನ ಬೇರೆಡೆ ಸೆಳೆಯುವ ಉದ್ದೇಶವೂ ಇದರ ಹಿಂದಿದೆ’ ಎಂದು ಹೇಳಿದ್ದಾರೆ. ‘ಈ ವರ್ಷದ ಜೂನ್‌ನಲ್ಲಿ ಚೀನಾದ ಗೃಹ ಇಲಾಖೆಯಿಂದ ಉನ್ನತ ಅಧಿಕಾರಿಯೊಬ್ಬರನ್ನು ಅಮೆರಿಕದ ಸಿಯಾಟಲ್‌ಗೆ ಕಳುಹಿಸಲಾಗಿತ್ತು. ಅವರು ರಹಸ್ಯ ಸಭೆ ನಡೆಸಿ ಭಾರತ ಹಾಗೂ ಪಾಶ್ಚಾತ್ಯ ದೇಶಗಳ ನಡುವೆ ದ್ವೇಷ ಬಿತ್ತಲು ಸಂಚು ರೂಪಿಸಿದರು. ಅದರಂತೆ ಕೆನಡಾದಲ್ಲಿರುವ ಸಿಖ್ ಧಾರ್ಮಿಕ ನಾಯಕ ಹರದೀಪ್ ಸಿಂಗ್ ನಿಜ್ಜರ್‌ನನ್ನು ರಹಸ್ಯವಾಗಿ ಹತ್ಯೆ ಮಾಡಲಾಯಿತು. ಈ ವಿಷಯವನ್ನು ನನಗೆ ಕೆನಡಾದಲ್ಲಿ ನೆಲೆಸಿರುವ ಚೀನಾದ ಲೇಖಕ ಹಾಗೂ ಯೂಟ್ಯೂಬರ್ ಲಾವೋ ಡೆಂಗ್ ತಿಳಿಸಿದ್ದಾರೆ’ ಎಂದು ಜೆನ್ನಿಫರ್ ಮಾಹಿತಿ ನೀಡಿದ್ದಾರೆ.