ಸಾರಾಂಶ
ಬೀಜಿಂಗ್: ಚೀನಾದಲ್ಲಿ ಮಲ ತುಂಬಿದ್ದ ಒಳಚರಂಡಿಗೆ ಹೊಸದಾಗಿ ಅಳವಡಿಸಲಾಗಿದ್ದ ಚರಂಡಿ ಪೈಪ್ ಒತ್ತಡ ಪರೀಕ್ಷೆ ವೇಳೆ ಸ್ಫೋಟಗೊಂಡಿದೆ. ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾವಿರಾರು ಮಂದಿ ದಾರಿಹೋಕರು, ಬೈಕ್ ಸವಾರರು ಹಾಗೂ ಕಾರುಗಳಿಗೆ ಮಲ ತುಂಬಿದ್ದ ನೀರು ಚಿಮ್ಮಿ ಅವರಿಗೆಲ್ಲ ಮಲಸ್ನಾನವಾಗಿದೆ.
ದಕ್ಷಿಣ ಚೀನಾದ ನ್ಯಾನಿಯಾಂಗ್‌ನ ಜನ ನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೈಪ್ ಒಡೆದು 33 ಮೀ. ಎತ್ತರಕ್ಕೆ ಮಲವು ಚಿಮ್ಮಿದ್ದು, ಹಠಾತ್ ಕೊಳಚೆ ಸ್ಫೋಟದಿಂದ ಹಲವಾರು ವಾಹನಗಳಿಗೆ ಹಾನಿಯಾಗಿವೆ. ಇನ್ನು ಪೈಪ್ ಒಡೆದು ಮಲ ಹೊರ ಚಿಮ್ಮುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುದ್ದಿಗಾರರ ಮಾತನಾಡಿದ ಕಾರು ಮಾಲೀಕನೊಬ್ಬ, ‘ನನ್ನ ಕಾರನ್ನು ನೋಡಿ ವಾಂತಿ ಬರುತ್ತಿದೆ. ಅದನ್ನು ಮತ್ತೆ ಹೇಗೆ ಬಳಸಬೇಕು ಎಂದೇ ಯೋಚನೆ ಆಗಿದೆ’ ಎಂದ. ‘ನನಗೆ ಮಲಮಜ್ಜನವಾಗಿದೆ. ಕೆಟ್ಟ ವಾಸನೆ ಬರುತ್ತಿದೆ’ ಎಂದು ಇನ್ನೊಬ್ಬ ಅಳಲು ತೋಡಿಕೊಂಡ.
==
ನ್ಯಾ। ಹೇಮಾ ರೀತಿಯ ಸಮಿತಿಗಳು ಎಲ್ಲ ಚಿತ್ರೋದ್ಯಮದಲ್ಲಿ ಅಗತ್ಯ: ಪ್ರಿಯಾಮಣಿ
ಯಾಸ್ ಐಸ್‌ಲ್ಯಾಂಡ್ (ಅಬುಧಾಬಿ): ಕೇರಳ ಚಿತ್ರೋದ್ಯಮದ ಲೈಂಗಿಕ ಹಗರಣ ಬಯಲಿಗೆಳೆದ ನ್ಯಾ। ಹೇಮಾ ಸಮಿತಿಯಂತಹ ಹೆಚ್ಚಿನ ಸಮಿತಿಗಳನ್ನು ಇತರೆ ಚಲನಚಿತ್ರೋದ್ಯಮದಲ್ಲಿ ರಚಿಸುವ ಅಗತ್ಯವಿದೆ ಎಂದು ಬಹುಭಾಷಾ ನಟಿ ಪ್ರಿಯಾಮಣಿ ತಿಳಿಸಿದ್ದಾರೆ.ಇಂಟರ್‌ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್ ಉತ್ಸವದಲ್ಲಿ ಮಾತನಾಡಿದ ಅವರು, ‘ಪ್ರಮುಖವಾಗಿ ಕೈಗಾರಿಕೆ ಹಾಗೂ ಇತರೆ ಯಾವುದೇ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷತೆ ಇಲ್ಲದಿದ್ದರೆ ಹೇಗೆ? ಆದ್ದರಿಂದ ಈ ರೀತಿಯ ಸಮಿತಿಗಳನ್ನು ರಚಿಸುವುದರಿಂದ ಹೆಣ್ಣು ಮಕ್ಕಳು ಸುರಕ್ಷಿತವಾಗಿರುತ್ತಾರೆ. ಕೇರಳ ಚಿತ್ರರಂಗದಲ್ಲಿ ಈ ಹಿಂದೆ ಏನು ನಡೆದಿತ್ತು ಎಂಬುದನ್ನು ತಿಳಿಯಲು ಈ ನ್ಯಾ। ಹೇಮಾ ಸಮಿತಿ ವರದಿಯನ್ನು ನೀಡಿತ್ತು. ಈ ರೀತಿ ಎಲ್ಲಾ ಚಿತ್ರೋದ್ಯಮಗಳಲ್ಲಿ ಸಮಿತಿ ರಚನೆ ಆಗಬೇಕು’ ಎಂದರು.
==
ಸೋಮನಾಥದಲ್ಲಿ 9 ಅಕ್ರಮ ಮಸೀದಿ ತೆರವು
ಗಿರ್ ಸೋಮನಾಥ: ಗುಜರಾತ್‌ನ ಸೋಮನಾಥ ದೇಗುಲ ಸುತ್ತಲು ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಶನಿವಾರ ಆರಂಭಿಸಲಾಗಿದೆ. ಈ ವೇಳೆ 45 ವಸತಿ ಕಟ್ಟಡಗಳ ಜೊತೆಗೆ 9 ಮಸೀದಿ/ದರ್ಗಾಗಳನ್ನು ಕೆಡವಲಾಗಿದೆ. ಸುಮಾರು 320 ಕೋಟಿ ಮೌಲ್ಯದ ಅಂದಾಜು 102 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ.
==
ನೇಪಾಳ ಪ್ರವಾಹಕ್ಕೆ 59 ಬಲಿ, ಬಿಹಾರಕ್ಕೂ ಪ್ರವಾಹ ಭೀತಿ
ಕಾಠ್ಮಂಡು/ಪಟನಾ: ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶನಿವಾರ ನೇಪಾಳದಲ್ಲಿ ಭೂಕುಸಿತ ಹಾಗೂ ಪ್ರವಾಹ ಉಂಟಾಗಿದ್ದು, ಕನಿಷ್ಠ 59 ಜನ ಮೃತಪಟ್ಟಿದ್ದಾರೆ. 36 ಜನ ಗಾಯಗೊಂಡಿದ್ದಾರೆ.ನೇಪಾಳದ ಕೆಲ ಭಾಗಗಳು ಜಲಾವೃತಗೊಂಡಿವೆ. ಪ್ರವಾಹಕ್ಕೆ ಸಿಲುಕಿ 44 ಮಂದಿ ಕಾಣೆಯಾಗಿದ್ದು, 1,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳ ಗಡಿಯಲ್ಲಿ ಭಾಗದಲ್ಲಿ ಈ ಪ್ರವಾಹ ಉಂಟಾಗಿದ್ದು, ಬಿಹಾರಕ್ಕೂ ಈ ಪ್ರವಾಹ ಭೀತಿ ಎದುರಾಗಿದೆ. ಸುರಿಯುತ್ತಿರುವ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿವೆ. ಈಗಾಗಲೇ ವಾಲ್ಮೀಕಿನಗರ ಮತ್ತು ಬಿರ್‌ಪುರ ಬ್ಯಾರೇಜ್‌ಗಳಿಂದ ನೀರು ಬಿಡುಗಡೆ ಮಾಡಲಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಮಳೆಯಿಂದಾಗಿ 12 ಜಿಲ್ಲೆಗಳಲ್ಲಿ 13.5 ಲಕ್ಷಕ್ಕೂ ಹೆಚ್ಚು ಜನರ ಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.
==
ಕಾಳಸಂತೆಯಲ್ಲಿ ಟಿಕೆಟ್: ಬುಕ್ ಮೈ ಶೋ ವಿರುದ್ಧ ತನಿಖೆ
ಮುಂಬೈ: ಬ್ರಿಟಿಷ್ ರಾಕ್ ಬ್ಯಾಂಡ್ ಕೋಲ್ಡ್‌ಪ್ಲೇ ಕಾರ್ಯಕ್ರಮಗಳ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಿದ ಆರೋಪದ ಮೇಲೆ ಮುಂಬೈ ಪೊಲೀಸರು ಬುಕ್‌ಮೈಶೋ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹ-ಸಂಸ್ಥಾಪಕ ಆಶಿಶ್ ಹೇಮರಾಜನಿ ಮತ್ತು ಕಂಪನಿಯ ತಾಂತ್ರಿಕ ಮುಖ್ಯಸ್ಥರಿಗೆ ಸಮನ್ಸ್ ನೀಡಿದ್ದಾರೆ.ನವಿ ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ಜನವರಿಯಿಂದ ನಡೆಯಲಿರುವ ಕೋಲ್ಡ್ ಪ್ಲೇ ಸಂಗೀತ ಕಾರ್ಯಕ್ರಮಗಳ ಟಿಕೆಟ್‌ಗಳ ಬ್ಲಾಕ್ ಮಾರ್ಕೆಟಿಂಗ್‌ಗೆ ಬುಕ್ ಮೈ ಶೋ ವೇದಿಕೆ ಆಗಿದೆ ಎಂದು ವಕೀಲರೊಬ್ಬರು ದೂರಿದ್ದರು. ಈ ಮೇರೆಗೆ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ತನಿಖೆಯನ್ನು ಪ್ರಾರಂಭಿಸಿದೆ.
==
ಅಕ್ಕಿ ಮೇಲಿನ ರಫ್ತು ನಿಷೇಧ ರದ್ದು: ತಕ್ಷಣದಿಂದಲೇ ಜಾರಿ
ನವದೆಹಲಿ: ಸ್ಥಳೀಯವಾಗಿ ಪೂರೈಕೆಯನ್ನು ಹೆಚ್ಚಿಸುವ ಸಲುವಾಗಿ ಅಕ್ಕಿ ರಫ್ತಿನ ಮೇಲೆ ಹೇರಲಾಗಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ಶನಿವಾರ ರದ್ದುಗೊಳಿಸಿದೆ. ಜೊತೆಗೆ ಪ್ರತಿ ಟನ್ 490 ಡಾಲರ್ ಕನಿಷ್ಠ ರಫ್ತು ದರ ನಿಗದಿಪಡಿಸಿದೆ.ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಿ ವ್ಯಾಪಾರದ ಮಹಾನಿರ್ದೇಶಕರು, ‘2023ರ ಜು.20ರಂದು ಅಕ್ಕಿ ರಫ್ತಿನ ಮೇಲೆ ಹೇರಲಾಗಿದ್ದ ನಿಷೇಧವನ್ನು ರದ್ದುಗೊಳಿಸಲಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ ಆದೇಶದ ವರೆಗೆ ಅಸ್ತಿತ್ವದಲ್ಲಿ ಇರಲಿದೆ’ ಎಂದರು.
ದೇಶದಲ್ಲಿ ಅಕ್ಕಿ ಲಭ್ಯತೆ ಕಡಿಮೆ ಆಗಿ ಬೆಲೆ ಏರಿದ್ದ ಕಾರಣ 2023ರ ಜು.20ರಂದು ಬಾಸ್ಮತಿಯೇತರ ಅಕ್ಕಿ (ಸಾಮಾನ್ಯ ಆಕ್ಕಿ) ರಫ್ತು ನಿಷೇಧಿಸಲಾಗಿತ್ತು.
==
ಪಂಜಾಬ್ ಸಿಎಂ ಮಾನ್‌ಗೆ ಲೆಪ್ಟೊಸ್ಪಿರೋಸಿಸ್ ಸೋಂಕು ದೃಢ
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಲ್ಲಿ ಲೆಪ್ಟೊಸ್ಪಿರೋಸಿಸ್ ಸೋಂಕು ದೃಢಪಟ್ಟಿದೆ. ಆರೋಗ್ಯ ತಪಾಸಣೆಗೆಂದು ಅವರನ್ನು ಮೊಹಾಲಿಯ ಫಾರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ.‘ಮಾನ್ ಅವರಿಗೆ ರೋಗನಿರೋಧಕಗಳನ್ನು ನೀಡಲಾಗಿದ್ದು, ಈಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.
ಲೆಪ್ಟೊಸ್ಪಿರೋಸಿಸ್ ಎಂಬುದು ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಂಡುಬರುವ ಕಾಯಿಲೆಯಾಗಿದ್ದು, ಸೋಂಕಿತ ಪ್ರಾಣಿಗಳ ಮೂತ್ರದಿಂದ ಅಥವಾ ಕಲುಷಿತ ವಾತಾವರಣದಿಂದ ತಗುಲುತ್ತದೆ.
ದೇಹದ ಮೇಲಿನ ಗಾಯಗಳು, ಬಾಯಿ, ಕಿವಿ, ಕಣ್ಣುಗಳ ಮೂಲಕ ಸೋಂಕು ಹರಡುವ ಬ್ಯಾಕ್ಟೀರಿಯಾಗಳು ಹರಡುತ್ತವೆ.