ಸಾರಾಂಶ
ಈಗಾಗಲೇ ವೃದ್ಧರ ಜನಸಂಖ್ಯೆ ಏರಿಕೆ ಸಮಸ್ಯೆ ಎದುರಿಸುತ್ತಿರುವ ಚೀನಾದಲ್ಲಿ ಕಳೆದ ವರ್ಷವೂ ಜನಸಂಖ್ಯೆ ಕುಸಿದಿದೆ ಎಂದು ತಿಳಿದುಬಂದಿದೆ.
ತೈಪೇ: ಈಗಾಗಲೇ ವೃದ್ಧರ ಜನಸಂಖ್ಯೆ ಏರಿಕೆ ಸಮಸ್ಯೆ ಎದುರಿಸುತ್ತಿರುವ ಚೀನಾದಲ್ಲಿ ಕಳೆದ ವರ್ಷವೂ ಜನಸಂಖ್ಯೆ ಕುಸಿದಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕಳೆದ 3 ವರ್ಷಗಳಿಂದ ನಿರಂತರವಾಗಿ ಅಲ್ಲಿನ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಸರ್ಕಾರಕ್ಕೆ ಹಾಗೂ ಆರ್ಥಿಕತೆಗೆ ತಲೆನೋವಾಗಿ ಪರಿಣಮಿಸಿದೆ.
2023ರಲ್ಲಿ ಚೀನಾ ಜನಸಂಖ್ಯೆ 140.9 ಕೋಟಿ ಇತ್ತು. ಅದು 2024ರಲ್ಲಿ 14 ಲಕ್ಷದಷ್ಟು ಕುಸಿದಿದ್ದು,140.8 ಕೋಟಿಗೆ ಇಳಿದಿದೆ.
1980ರಲ್ಲಿ ಚೀನಾ 1 ಮಗು ನೀತಿ ಜಾರಿಗೆ ತಂದ ನಂತರ ಜನಸಂಖ್ಯೆ ನಿಯಂತ್ರಣ ಶುರುವಾಯಿತು. ಆದರೆ ಇತ್ತೀಚಿನ 3 ವರ್ಷದಲ್ಲಿ ಜನಸಂಖ್ಯೆ ಕುಗ್ಗುತ್ತಿದೆ. ಜನರ ಜೀವನ ವೆಚ್ಚ ಹೆಚ್ಚಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಇದರಿಂದಾಗಿ ಯುವಕರು ಮದುವೆಯಾಗದೆ ಅಥವಾ ಮದುವೆಯಾದರೂ ಮಕ್ಕಳು ಮಾಡಿಕೊಳ್ಳದೇ ಇರುವಂತಾಗಿದೆ. ಜತೆಗೆ, ವಲಸಿಗರಿಗೆ ಅಷ್ಟಾಗಿ ತೆರೆದುಕೊಳ್ಳದಿರುವುದೂ ಚೀನಾಗೆ ಮುಳ್ಳಾಗುತ್ತಿದೆ. ಇದರಿಂದಾಗಿ ದೇಶವು ದುಡಿಯುವ ಜನರ ಕೊರತೆಯನ್ನೂ ಎದುರಿಸುತ್ತಿದೆ.
ಲಿಂಗಾನುಪಾತ ಕುಸಿತ:
ಚೀನಾದ ಗ್ರಾಮೀಣ ಭಾಗದಲ್ಲಿ ಜನ ಹೆಚ್ಚಾಗಿ ಗಂಡು ಸಂತಾನಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದು, ಹೆಣ್ಣು ಭ್ರೂಣಹತ್ಯೆಗಳಿಂದಾಗಿ ಲಿಂಗಾನುಪಾತವೂ ಕುಸಿತ ಕಂಡಿದೆ. ಇದರ ಫಲವಾಗಿ ಪ್ರಸ್ತುತ ಪ್ರತಿ 104.34 ಗಂಡುಗಳಿಗೆ ಕೇವಲ 100 ಹೆಣ್ಣು ಮಕ್ಕಳಿದ್ದಾರೆ. ಜನನ ಪ್ರಮಾಣ ಕುಸಿತವೂ ಇದಕ್ಕೆ ಇನ್ನಷ್ಟು ಪೆಟ್ಟು ಕೊಡುತ್ತಿದೆ.
ಒಟ್ಟು ಜನಸಂಖ್ಯೆಯಲ್ಲಿ ಈಗ 31 ಕೋಟಿಯಷ್ಟು (ಶೇ.22) ಜನ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. 2035ರ ಹೊತ್ತಿಗೆ ಈ ಸಂಖ್ಯೆ ಶೇ.30 ದಾಟುವ ಅಂದಾಜಿದೆ. ಅಂದರೆ ವೃದ್ಧರ ಸಂಖ್ಯೆ ಹೆಚ್ಚಾಗಿ ಯುವಕರ ಸಂಖ್ಯೆ ಕ್ಷೀಣಿಸುವ ಆತಂಕವಿದೆ. 2050ಕ್ಕೆ ದೇಶದ ಜನಸಂಖ್ಯೆ 130 ಕೋಟಿಗೆ ಇಳಿವ ಸಂಭವವಿದೆ.
ಇತರ ದೇಶದಲ್ಲೂ ಇಳಿಕೆ:ಜಪಾನ್ ದೇಶದ ಜನಸಂಖ್ಯೆ 2008ರ ಬಳಿಕ 30 ಲಕ್ಷದಷ್ಟು ಜನಸಂಖ್ಯೆ ಇಳಿದಿದೆ. ಇಟಲಿ ದೇಶದಲ್ಲಿ 2023ರಲ್ಲಿ ಮೊದಲ ಬಾರಿ ಜನನ ಪ್ರಮಾಣ 2023ರಲ್ಲಿ 4 ಲಕ್ಷಕ್ಕಿಂತ ಕೆಳಗೆ (3.80 ಲಕ್ಷ) ಇಳಿದಿದೆ.ದಕ್ಷಿಣ ಕೊರಿಯಾದಲ್ಲಿ ಮೊದಲ ಬಾರಿ 2021ರಲ್ಲಿ ಜನಸಂಖ್ಯೆ ಇಳಿದಿತ್ತು. 2023ರಲ್ಲಿ ಚೇತರಿಸಿದೆ.