10 ವರ್ಷಗಳ ಬಳಿಕ ಅಮೆರಿಕ ಭೇಟಿಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಸ್ವಾಗತ ಕೋರಿದ್ದಾರೆ.- 64 ವರ್ಷಗಳಲ್ಲಿ ಈ ರೀತಿಯ ಸ್ವಾಗತ ಇದೇ ಮೊದಲು
ವಾಷಿಂಗ್ಟನ್: 10 ವರ್ಷಗಳ ಬಳಿಕ ಅಮೆರಿಕ ಭೇಟಿಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಸ್ವಾಗತ ಕೋರಿದ್ದಾರೆ. 3 ದಿನಗಳ ಭೇಟಿಗಾಗಿ ಪತ್ನಿ ಸಮೇತ ಆಗಮಿಸಿದ ಕಮ್ಯನಿಸ್ಟ್ ದೇಶದ ನಾಯಕನ ಸ್ವಾಗತಕ್ಕೆ ಸ್ವತಃ ಟ್ರಂಪ್ ಪತ್ನಿ ಸಮೇತರಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಕ್ಸಿ ಜಿನ್‌ಪಿಂಗ್, ಪತ್ನಿ ಪೆಂಗ್ ಲಿಯುಯಾನ್ ವಿಶೇಷ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಸ್ವಾಗತ ಕೋರಿದರು. ವಿದೇಶದ ಮುಖ್ಯಸ್ಥರೊಬ್ಬರನ್ನು ಅಮೆರಿಕ ಅಧ್ಯಕ್ಷರು ಈ ರೀತಿ ಏರ್ಪೋರ್ಟ್‌ಗೆ ತೆರಳಿ ಸ್ವಾಗತಿಸಿದ್ದು 1962ರ ಬಳಿಕ ಅಂದರೆ 64 ವರ್ಷದಲ್ಲಿ ಇದೇ ಮೊದಲು. 1962ರಲ್ಲಿ ಅಂದಿನ ಅಧ್ಯಕ್ಷ ಜಾನ್ ಎಫ್.ಕೆನಡಿ ಅವರು ಬ್ರಿಟನ್ ಪ್ರಧಾನಿ ಹ್ಯಾರಾಲ್ಡ್ ಮೆಕ್‌ಮಿಲನ್‌ರನ್ನು ಏರ್ಪೋರ್ಟ್‌ಗೆ ತೆರಳಿ ಸ್ವಾಗತಿಸಿದ್ದರು.
ವಿಶೇಷ ಗೌರವ:
ವಿಮಾನದಿಂದಿಳಿಯುತ್ತಿದ್ದಂತೆ ಕ್ಸಿಗೆ ಟ್ರಂಪ್ ಕುಶಲೋಪರಿ ವಿಚಾರಿಸಿದರು. ತರುವಾಯ ಕುಶಾಲತೋಪುಗಳ ಸಿಡಿತ, ಅಮೆರಿಕ ವಾಯುಪಡೆಯ ವಾದ್ಯದ ನಡುವೆ 21 ಗೌರವ ರಕ್ಷಕ ಸಿಬ್ಬಂದಿ ಗೌರವ ಸಲ್ಲಿಸಿದರು. ನಂತರ ಕ್ಸಿ ದಂಪತಿಯನ್ನು 100 ಅಡಿ ಉದ್ದದ ಕೆಂಪುಹಾಸಿನ ಮೂಲಕ ಕರೆದೊಯ್ಯಲಾಯಿತು.
ಸಂಗೀತ ಬ್ಯಾಂಡ್‌ಗಳ ಮೂಲಕ ಎರಡೂ ದೇಶಗಳ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಅಮೆರಿಕದ ಬಿ-1ಬಾಂಬರ್‌ಗಳು ಏರ್‌ಬೇಸ್ ಮೂಲಕ ಹಾದು ಹೋಗಿ ವಿಶೇಷ ಗೌರವ ಸಲ್ಲಿಸಿದವು. ಕ್ಸಿ ಮತ್ತು ಅವರ ಪತ್ನಿ ಕಾರಿನ ಮೂಲಕ ಹಾಗೂ ಟ್ರಂಪ್ ಮತ್ತು ಮೆಲೇನಾ ಟ್ರಂಪ್ ಕಾಪ್ಟರ್ ಮೂಲಕ ವೈಟ್‌ಹೌಸ್ ತಲುಪಿದರು.
ಪ್ರಮುಖ ವಿಚಾರ ಚರ್ಚೆ:
ವ್ಯಾಪಾರ ತೆರಿಗೆ, ತಂತ್ರಜ್ಞಾನ, ಎಐ, ರಕ್ಷಣಾ ಒಪ್ಪಂದಗಳು, ಪೂರ್ವ ಏಷ್ಯಾ ಸಂಘರ್ಷಗಳು, ರಷ್ಯಾ-ಉಕ್ರೇನ್ ಯುದ್ಧ, ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿ, ತೈವಾನ್‌ಗೆ ಅಮೆರಿಕದ ಶಸ್ತ್ರಾಸ್ತ್ರಗಳ ಮಾರಾಟ ವಿಚಾರವು ಕ್ಸಿ ಮತ್ತು ಟ್ರಂಪ್ ಅವರ ಮೂರು ದಿನಗಳ ಭೇಟಿ ವೇಳೆ ಪ್ರಮುಖವಾಗಿ ಚರ್ಚೆಗೆ ಬರಲಿದೆ.
3 ಮಾಧ್ಯಮ ನಿಷೇಧಿಸಿದ್ದ ಟ್ರಂಪ್ ಆದೇಶ ಅಮೆರಿಕ ಕೋರ್ಟ್‌ನಿಂದಲೇ ರದ್ದು!
ನ್ಯೂಯಾರ್ಕ್: ಅಮೆರಿಕದಲ್ಲಿ ಮಾಧ್ಯಮಗಳ ವಿರುದ್ಧ ಸಮರ ಸಾರಿ ಸಿಎನ್‌ಎನ್, ಎಂಎಸ್ ನೌ, ಪೊಲಿಟಿಕೋ ಮಾಧ್ಯಮ ಸಂಸ್ಥೆಗಳಿಗೆ ಶ್ವೇತಭವನಕ್ಕೆ ನಿಷೇಧ ಹೇರಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೊಡ್ಡ ಹಿನ್ನಡೆಯಾಗಿದ್ದು, ಅವರ ಆದೇಶವನ್ನು ಫೆಡರಲ್ ನ್ಯಾಯಾಲಯ ರದ್ದುಗೊಳಿಸಿದೆ. ಸುಳ್ಳುಸುದ್ದಿ ಪ್ರಸಾರ ಆರೋಪದಲ್ಲಿ ಟ್ರಂಪ್ ಈ 3 ಮಾಧ್ಯಮ ಸಂಸ್ಥೆಗಳಿಗೆ ನಿಷೇಧ ಹೇರಿದ್ದರು. ಆದರೆ ಇದನ್ನು ಪ್ರಶ್ನಿಸಿ ಅವು ಅಮೆರಿಕ ಜಿಲ್ಲಾ ಕೋರ್ಟ್‌ನ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ತಕ್ಷಣಕ್ಕೆ ಈ ಮಾಧ್ಯಮಗಳಿಗೆ ಶ್ವೇತಭವನಕ್ಕೆ ಪತ್ರಿಕಾ ಪಾಸ್ ವಿತರಿಸಬೇಕೆಂದು ಆದೇಶಿಸಿದ್ದಾರೆ. ಜತೆಗೆ 14 ದಿನಗಳವರೆಗೆ ಟ್ರಂಪ್ ನಿಷೇಧ ಆದೇಶವನ್ನು ರದ್ದುಗೊಳಿಸಿದ್ದಾರೆ. ತಮ್ಮ ಕಾರ್ಯಕ್ರಮಗಳನ್ನು ಈ ಮೂರು ಸುದ್ದಿಸಂಸ್ಥೆಗಳು ಪ್ರಸಾರ ಮಾಡಿರಲಿಲ್ಲ ಎಂದು ಟ್ರಂಪ್ ಸ್ವತಃ ತಮ್ಮದೇ ಆದ ಟ್ರಂಪ್ ಟೀವಿ ಎಂಬ ಯುಟ್ಯೂಬ್ ಚಾನೆಲ್ ಆರಂಭಿಸಿದ್ದರು.
