ಸಾರಾಂಶ
ಮುಂಬೈ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ತಮ್ಮ ತವರು ರಾಜ್ಯ ಮಹಾರಾಷ್ಟ್ರಕ್ಕೆ ಭೇಟಿದ ನ್ಯಾ. ಬಿ.ಆರ್. ಗವಾಯಿ ಅವರನ್ನು ಸ್ವಾಗತಿಸುವಲ್ಲಿ ಭಾರೀ ಶಿಷ್ಟಾಚಾರ ಲೋಪವಾಗಿದೆ.
ಸ್ವಾಗತಕ್ಕೆ ಆಗಮಿಸಬೇಕಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಗೈರಾಗಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಗವಾಯಿ ‘ಸಿಜೆಐ ಮೊದಲ ಬಾರಿಗೆ ಮಹಾರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದರೆ, ರಾಜ್ಯದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಆಯುಕ್ತರು ಹಾಜರಿರಬೇಕಿತ್ತು. ಅವರು ಈ ಬಗ್ಗೆ ಯೋಚಿಸಬೇಕು. ಇದು ಹೊಸ ಶಿಷ್ಟಾಚಾರವೇನೂ ಅಲ್ಲ. ಇದು ಒಂದು ಸಾಂವಿಧಾನಿಕ ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ದೊರೆಯಬೇಕಾದ ಗೌರವದ ವಿಷಯ. ಪ್ರಜಾಪ್ರಭುತ್ವದ 3 ಸ್ತಂಭಗಳಾದ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳು ಸಮಾನವಾಗಿವೆ ಮತ್ತು ಸಂವಿಧಾನದ ಪ್ರತಿಯೊಂದು ಅಂಗವೂ ಪರಸ್ಪರ ಗೌರವ ತೋರಿಸಬೇಕು’ ಎಂದಿದ್ದಾರೆ.
ಇಂದಿನಿಂದ ವಿದೇಶದಲ್ಲಿ ಪಾಕ್ ವಿರುದ್ಧ ಸಚಿವ ಜೈಶಂಕರ್ ಉಗ್ರ ಸಮರ
ನವದೆಹಲಿ: ಪಾಕಿಸ್ತಾನದ ಉಗ್ರ ಮುಖವಾಡ ಬಯಲಿಗೆ ಭಾರತ ಮೇ 22ರಂದು ಸರ್ವಪಕ್ಷಗಳ ನಿಯೋಗವನ್ನು ವಿದೇಶಕ್ಕೆ ಕಳುಹಿಸಲು ಸಜ್ಜಾಗಿರುವಾಗಲೇ, ಅಂಥದ್ದೇ ದಾಳಿಗೆ ವಿದೇಶಾಂಗ ಸಚಿವ ಜೈಶಂಕರ್ ಕೂಡಾ ಸಜ್ಜಾಗಿದ್ದಾರೆ. ಸಚಿವ ಜೈಶಂಕರ್ ಅವರು ಮೇ 19ರಿಂದ 24ರವರೆಗೆ 6 ದಿನಗಳು ಜರ್ಮನಿ, ನೆದರ್ಲೆಂಡ್ಸ್ ಮತ್ತು ಡೆನ್ಮಾರ್ಟ್‌ಗಳಿಗೆ ತೆರಳಲಿದ್ದಾರೆ. ಅಲ್ಲಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಜೊತೆಗೆ ಪಾಕಿಸ್ತಾನ ನಡೆಸುತ್ತಿರುವ ಗಡಿ ಆಚೆಗಿನ ಭಯೋತ್ಪಾದನೆ ಕುರಿತು ಮಾಹಿತಿ ನೀಡಲಿದ್ದಾರೆ.ಇನ್ನೊಂದೆಡೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮೇ 20ರಂದು ವಿವಿಧ ದೇಶಗಳ ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳಿಗೆ ಪಾಕ್ ಉಗ್ರವಾದದ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೊಲ್ಲಾಪುರದ ಜವಳಿ ಕಾರ್ಖಾನೆಯಲ್ಲಿ ಬೆಂಕಿ ದುರಂತಕ್ಕೆ 8 ಬಲಿ
ಮುಂಬೈ: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜವಳಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದಾಗಿ ಒಂದುವರೆ ವರ್ಷದ ಮಗು ಸೇರಿ 8 ಜನರು ದುರ್ಮರಣ ಹೊಂದಿದ್ದಾರೆ. ಭಾನುವಾರ ಮಧ್ಯಾಹ್ನ ಸೊಲ್ಲಾಪುರದ ಅಕ್ಕಲಕೋಟೆ ರಸ್ತೆ ಬಳಿ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿದ್ದ ಕೇಂದ್ರ ಜವಳಿ ಮಿಲ್‌ನಲ್ಲಿ ದುರಂತ ಸಂಭವಿಸಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಕಾರ್ಖಾನೆಯ ಮಾಲೀಕ ಹಾಜಿ ಉಸ್ಮಾನ್, ಅವರ ಒಂದೂವರೆ ವರ್ಷದ ಮೊಮ್ಮಗ ಮತ್ತು ಕಾರ್ಮಿಕರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ತನಿಖೆ ಶುರುವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರಿಗೆ ಎಸ್‌ಬಿಐ ಶಾಕ್: ಸತತ 2ನೇ ತಿಂಗಳು ಎಫ್‌ಡಿ ಬಡ್ಡಿದರ ಶೇ.0.20ರಷ್ಟು ಇಳಿಕೆ
ಮುಂಬೈ: ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸ್ಥಿರ ಠೇವಣಿ ಮೇಲಿನ ಬಡ್ಡಿದರವನ್ನು ಸತತ 2ನೇ ತಿಂಗಳು ಕಡಿತಗೊಳಿಸಿದೆ. ಎಲ್ಲಾ ಮಾದರಿಯ ಎಫ್‌ಡಿ ದರವನ್ನು ಶೇ.0.20ರಷ್ಟು ಇಳಿಸಿದ್ದು, ಮೇ 16ರಿಂದಲೇ ಹೊಸ ಬಡ್ಡಿದರ ಜಾರಿಗೆ ಬಂದಿದೆ. ಕಳೆದ ಬಾರಿ ಏ.15ರಂದು ಸಹ ಬಡ್ಡಿದರ ಕಡಿತಗೊಳಿಸಿತ್ತು. ಹೊಸ ಬಡ್ಡಿದರ ಶೇ.3.30ಕ್ಕೆ ಕುಸಿದಿದೆ. ಅಮೃತ ವೃಷ್ಟಿ ಯೋಜನೆಯ ಬಡ್ಡಿದರವನ್ನು ಶೇ.6.85ಕ್ಕೆ ಇಳಿಸಿದೆ. ಮತ್ತೊಂದೆಡೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಎಫ್‌ಡಿ ದರವು ಶೇ.3.80ಕ್ಕೆ ಕುಸಿದಿದೆ. ಇವರ ಅಮೃತ ವೃಷ್ಟಿ ಬಡ್ಡಿದರವನ್ನು ಶೇ.7.35ಕ್ಕೆ ಇಳಿಸಿದೆ.
ಗಾಜಾ ಮೇಲೆ ಇಸ್ರೇಲ್ ದಾಳಿ: 103 ಜನರು ಬಲಿ
ದೇರ್ ಅಲ್ ಬಲಾಹ್: ಇಸ್ರೇಲ್ ಸೇನೆಯು ಶನಿವಾರ ರಾತ್ರಿ ಹಾಗೂ ಭಾನುವಾರ ಮುಂಜಾನೆ ಗಾಜಾ ಪಟ್ಟಿ ಮೇಲೆ ಗುಂಡಿನ ಮಳೆಗರೆದಿದ್ದು, ಇದರಿಂದಾಗಿ 103 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಜಾ ಪಟ್ಟಿಯನ್ನು ಆಕ್ರಮಿಸಿಕೊಳ್ಳಲು ಇಸ್ರೇಲ್ ನಡೆಸುತ್ತಿರುವ ಆಪರೇಷನ್ ‘ಗಿಡಿಯೋನ್ಸ್ ಚಾರಿಯೆಟ್’ನ ಭಾಗವಾಗಿ ಈ ದಾಳಿ ನಡೆಸಲಾಗಿತ್ತು. ಶನಿವಾರ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಉತ್ತರ ಗಾಜಾದಲ್ಲಿನ ಆಸ್ಪತ್ರೆಯು ಬಂದ್ ಆಗಿದೆ. ದಾಳಿಯಿಂದಾಗಿ ಖಾನ್ ಯೂನಿಸ್‌ನಲ್ಲಿ 48, ಜಬಲಿಯಾದಲ್ಲಿ 10, ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಇಲಾಖೆ ತಿಳಿಸಿದೆ.