ಸಾರಾಂಶ
ಕಠುವಾ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದೆ. ಮೇಘಸ್ಫೋಟದಿಂದ ಸಂಭವಿಸಿದ ಭಾರೀ ಮಳೆಯಬ್ಬರ, ಗುಡ್ಡಕುಸಿತದ ಘಟನೆಗಳಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಏಳು ಮಂದಿ ಭಾನುವಾರ ಮೃತಪಟ್ಟಿದ್ದಾರೆ.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದ ಮೇಘ ಸ್ಫೋಟದಲ್ಲಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟ ಬೆನ್ನಲ್ಲೇ, ಇದೀಗ ಕಠುವಾ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದೆ. ಮೇಘಸ್ಫೋಟದಿಂದ ಸಂಭವಿಸಿದ ಭಾರೀ ಮಳೆಯಬ್ಬರ, ಗುಡ್ಡಕುಸಿತದ ಘಟನೆಗಳಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಏಳು ಮಂದಿ ಭಾನುವಾರ ಮೃತಪಟ್ಟಿದ್ದಾರೆ.
ಜೋಧ್ ಘಾಟಿಯಲ್ಲಿ ಭಾರೀ ಪ್ರವಾಹದಿಂದಾಗಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಮೃತಪಟ್ಟರೆ, ಜಂಗಲೋತೆ ಗ್ರಾಮದ ಬಗ್ರಾದಲ್ಲಿ ಗುಡ್ಡಕುಸಿದು ತಾಯಿ-ಮಗಳು ಸಾವಿಗೀಡಾಗಿದ್ದಾರೆ. ಜೋಧ್‌ಘಾಟಿಯಲ್ಲಿ ಪ್ರವಾಹದಿಂದಾಗಿ ಹಲವು ಮನೆಗಳು ಮುಳುಗಡೆಯಾಗಿದೆ. ಗ್ರಾಮದಲ್ಲಿ ಸೇನೆಯು ರಕ್ಷಣಾ ಕಾರ್ಯ ಚುರುಕುಗೊಳಿಸಿದ್ದು, ಈಗಾಗಲೇ ಹೆಲಿಕಾಪ್ಟರ್ ಮೂಲಕ 15 ಮಂದಿಯನ್ನು ಏರ್‌ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಿದೆ. ಪೊಲೀಸರು, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯರ ಜತೆಗೆ ಸೇನೆಯು ರಕ್ಷಣಾ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.
ರೈಲು ಸೇವೆ ವ್ಯತ್ಯಯ:
ಕಠುವಾ ಜಿಲ್ಲೆಯಲ್ಲೂ ಮಳೆ ಮುಂದುವರಿದಿದ್ದು, ಜಮ್ಮು ಮತ್ತು ಪಠಾನ್‌ಕೋಟ್ ನಡುವಿನ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪರಿಹಾರ ಘೋಷಣೆ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿದಿಯಿಂದ ತಲಾ 2 ಲಕ್ಷ ಹಾಗೂ ತೀವ್ರ ಗಾಯಗೊಂಡವರಿಗೆ ತಲಾ 1 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.