ದಿಲ್ಲಿ ಐಎಎಸ್‌ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿ ವಿದ್ಯಾರ್ಥಿಗಳ ಸಾವು : ಐವರ ಬಂಧನ

| Published : Jul 30 2024, 12:38 AM IST / Updated: Jul 30 2024, 05:39 AM IST

ಸಾರಾಂಶ

ಇಲ್ಲಿನ ಐಎಎಸ್‌ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ.

ನವದೆಹಲಿ: ಇಲ್ಲಿನ ಐಎಎಸ್‌ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ.

ಜಲಾವೃತಗೊಂಡ ರಸ್ತೆಯಲ್ಲಿ ವೇಗವಾಗಿ ಕಾರು ಚಲಿಸಿ ತರಬೇತಿ ಕೇಂದ್ರದ ಗೇಟ್ ಮುರಿದು ಅದರೊಳಗೆ ನೀರು ನುಗ್ಗಲು ಕಾರಣನಾದ ವಾಹನ ಚಾಲಕ, ತರಬೇತಿ ಕೇಂದ್ರದ ಸಿಇಒ ಅಭಿಷೇಕ್ ಗುಪ್ತಾ, ಸಂಯೋಜಕ ದೇಶ್‌ಪಾಲ್ ಸಿಂಗ್ ಸೇರಿದಂತೆ ಐದು ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ತಲೆದಂಡ: ಈ ನಡುವೆ ಕಟ್ಟಡಗಳ ಅಕ್ರಮ ಪರಿಶೀಲಿಸದೇ ಕರ್ತವ್ಯಲೋಪ ಎಸಗಿದ ಮಹಾನಗರ ಪಾಲಿಕೆಯ ಓರ್ವ ಎಂಜಿನಿಯರ್‌ನನ್ನು ವಜಾಗೊಳಿಸಿದ್ದರೆ, ಮತ್ತೊಬ್ಬರನ್ನು ಪಾಲಿಕೆ ಅಮಾನತುಗೊಳಿಸಿದೆ.

ಧ್ವಂಸ: ಇದೆ ವೇಳೆ ಮಳೆ ನೀರು ಹರಿದುಹೋಗುವ ಕಾಲುವೆಗಳ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಧ್ವಂಸಗೊಳಿಸುವ ಕೆಲಸ ಆರಂಭಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಸೆಂಟರ್‌ಗಳಿಗೆ ಬೀಗ:

ದೆಹಲಿಯ ಐಎಎಸ್‌ ಕೋಚಿಂಗ್‌ ಸೆಂಟರ್‌ಗಳ ಕೇಂದ್ರ ಸ್ಥಾನಗಳ ಪೈಕಿ ಒಂದಾದ ಮುಖರ್ಜಿ ನಗರದಲ್ಲಿ ನೆಲಮಾಳಿಗೆಯನ್ನು ಅಕ್ರಮವಾಗಿ ಬಳಸುತ್ತಿದ್ದ ಕೇಂದ್ರಗಳಿಗೆ ಪಾಲಿಕೆ ಅಧಿಕಾರಿಗಳು ಬೀಗ ಹಾಕುವ ಕೆಲಸ ಪ್ರಾರಂಭಿಸಿದ್ದಾರೆ.

ಎಲ್‌ಜಿ ಭೇಟಿ:

ಮೃತ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಿ ಅವರ ಪರಿವಾರಗಳಿಗೆ ಪರಿಹಾರ ಒದಗಿಸುವಂತೆ ಕೋರಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಭೇಟಿಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸಾವಿನ ತನಿಖೆಗೆ ಸಮಿತಿ ರಚಿಸಿದ ಗೃಹ ಇಲಾಖೆ

ರಾಜೀಂದ್ರ ನಗರದ ಕೋಚಿಂಗ್ ಸೆಂಟರ್‌ನಲ್ಲಿ ಮೂವರು ಐಎಎಸ್‌ ಆಕಾಂಕ್ಷಿಗಳ ಸಾವಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಪ್ರಕರಣದ ಕುರಿತು ಕೂಲಂಕುಷ ತನಿಖೆಗೆ ಸಮಿತಿ ರಚಿಸಿದೆ. ಗೃಹ ಇಲಾಖೆ ರಚಿಸಿರುವ ಸಮಿತಿಯು ಘಟನೆ ಬಗ್ಗೆ ತನಿಖೆ ನಡೆಸಿ 30 ದಿನಗೊಳಗೆ ವರದಿ ಸಲ್ಲಿಸಲಿದೆ ಎಂದು ಸಚಿವಾಲಯ ‘ಎಕ್ಸ್‌’ ನಲ್ಲಿ ಪೋಸ್ಟ್‌ ಮಾಡಿದೆ. ಗೃಹ ಇಲಾಖೆಯ ಸಮಿತಿಯು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳನ್ನು ಒಳಗೊಳ್ಳಲಿದೆ.

ವಿದ್ಯಾರ್ಥಿಗಳ ಸಾವು: ಕಠಿಣ ಕ್ರಮಕ್ಕೆ ಸಂಸತ್‌ನಲ್ಲೂ ಆಗ್ರಹ ಇಲ್ಲಿನ ರಾಜಿಂದ್ರ ನಗರದಲ್ಲಿನ ತರಬೇತಿ ಕೇಂದ್ರದಲ್ಲಿ ಮೂರು ಐಎಎಸ್‌ ಆಕಾಂಕ್ಷಿಗಳ ಸಾವಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸೋಮವಾರ ಪಕ್ಷಾತೀತವಾಗಿ ಆಗ್ರಹಿಸಿದರು. 

ಈ ಅವಾಂತರಕ್ಕೆ ಆಪ್ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ ಹಾಗೂ ಅದರ ಅಧೀನದಲ್ಲಿರುವ ಮಹಾನಗರ ಪಾಲಿಕೆ ಮಳೆಗಾಲದ ಆರಂಭಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಲು ಸೋತಿದ್ದು ಕಾರಣ ಎಂದು ನವದೆಹಲಿ ಕ್ಷೇತ್ರದ ಬಿಜೆಪಿ ಸದಸ್ಯೆ ಬಾನ್ಸುರಿ ಸ್ವರಾಜ್ ಶೂನ್ಯ ವೇಳೆಯಲ್ಲಿ ಆರೊಪಿಸಿದ್ದು, ಈ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. 

ಸುರಕ್ಷತಾ ಕ್ರಮಗಳ ಉಲ್ಲಂಘನೆಯಾಗಿದೆ ಎಂದಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ತನಿಖೆಗೆ ಆಗ್ರಹಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಕೊಡುವಂತೆ ಆಗ್ರಹಿಸಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್‌ ಮಾತನಾಡಿ, ‘ಉತ್ತರ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಪ್ರಯೋಗವಾಗುವಂತೆ ಇಲ್ಲೂ ಆಗುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ. ಪ್ರಕರಣದ ಸಂಬಂಧ ಕೇಳಲಾದ ಪ್ರಶ್ನೆಯಿಂದ ತಪ್ಪಿಸಿಕೊಂಡ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಜನವರಿಯಲ್ಲಿಯೇ ಬಿಡುಗಡೆ ಮಾಡಲಾಗಿದೆ ಎಂದರು.