-ಜಿರಳೆ ಕೈಯಲ್ಲಿ ಪಾಕ್ ಧ್ವಜ ಹಿಡಿಸಿದ ಲೋಗೋ
- 3 ಹೆಸರುಗಳಲ್ಲಿ ಆನ್‌ಲೈನ್ ಅಭಿಯಾನ ಶುರು-ಸ್ಥಾಪಿತ ರಾಜಕೀಯ ಪಕ್ಷಗಳಿಗೆ ಜಿರಳೆ ಸವಾಲು
-ಭಾರತದ ಬಳಿಕ ನೆರೆ ದೇಶದಲ್ಲೂ ಅಭಿಯಾನಇಸ್ಲಾಮಾಬಾದ್: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕುವ ಉದ್ದೇಶದಿಂದ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇದೀಗ ಪಾಕಿಸ್ತಾನಕ್ಕೂ ವಿಸ್ತರಿಸಿದೆ.ಅಲ್ಲಿ ಕಾಕ್ರೋಚ್ ಅವಾಮಿ ಪಾರ್ಟಿ, ಕಾಕ್ರೋಚ್ ಅವಾಮಿ ಲೀಗ್ ಹಾಗೂ ಮುತ್ತಹಿದಾ ಕಾಕ್ರೋಚ್ ಮೂವ್‌ಮೆಂಟ್ ಎಂಬ 3 ಹೆಸರಿನಲ್ಲಿ ಆನ್ಲೈನ್ ಅಭಿಯಾನ ಆರಂಭವಾಗಿದೆ.
ಒಂದು ಖಾತೆಯ ಬಯೋದಲ್ಲಿ ‘ಪಾಕಿಸ್ತಾನಕ್ಕಾಗಿ, ಯುವಕರಿಂದ, ಯುವಕರ ರಾಜಕೀಯ ರಂಗ’ ಎಂಬ ಬರೆದುಕೊಳ್ಳಲಾಗಿದೆ. ಇನ್ನೊಂದರಲ್ಲಿ, ‘ನಾವು ವ್ಯವಸ್ಥೆಯು ಜಿರಳೆಗಳೆಂದು ಪರಿಗಣಿಸಿದ ಜನರ ಧ್ವನಿ’ ಎಂದು ಬರೆಯಲಾಗಿದೆ. ಅಭಿಯಾನದ ಲೋಗೊ ಕೂಡ ಭಾರತದ್ದನ್ನೇ ಹೋಲುವ ರೀತಿಯಲ್ಲಿದೆ. ಆದರೆ ಹಸಿರು ಮತ್ತು ಬಿಳಿ ಬಣ್ಣವನ್ನು ಅಳವಡಿಸಲಾಗಿದೆ. ಜಿರಳೆಯ ಕೈಯಲ್ಲಿ ಪಾಕ್ ಧ್ವಜವನ್ನು ಹಿಡಿಸಲಾಗಿದೆ. ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ), ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯವಂತಹ (ಪಿಪಿಪಿ) ಸ್ಥಾಪಿತ ರಾಜಕೀಯ ಪಕ್ಷಗಳಿಗೆ ವಿಶಿಷ್ಟ ಪರ್ಯಾಯವಾಗಿ ರೂಪುಗೊಳ್ಳುವ ರೀತಿಯಲ್ಲಿ ಇವುಗಳನ್ನು ಬಿಂಬಿಸಲಾಗುತ್ತಿದೆ.