ಸಾರಾಂಶ
ಆಪರೇಷನ್ ಸಿಂದೂರದ ಮೂಲಕ ಭಾರತದ ಮಿಲಿಟರಿ ಶ್ರೇಷ್ಠತೆಯ ಅನಾವರಣವಾಯಿತು. ಭಾರತವು ಪಾಕಿಸ್ತಾನದ ಉಗ್ರನೆಲೆಗಳು, ವಾಯುನೆಲೆ ಮತ್ತಿತರ ಕಡೆ ಯೋಜಿತ ದಾಳಿ ನಡೆಸಿತು. ಆದರೆ, ಪಾಕಿಸ್ತಾನಕ್ಕೆ ಭಾರತದ ಒಂದೇ ಒಂದು ನೆಲೆ ಮೇಲೆ ದಾಳಿ ನಡೆಸಲು ಆಗಲಿಲ್ಲ.
ನವದೆಹಲಿ: ಆಪರೇಷನ್ ಸಿಂದೂರದ ಮೂಲಕ ಭಾರತದ ಮಿಲಿಟರಿ ಶ್ರೇಷ್ಠತೆಯ ಅನಾವರಣವಾಯಿತು. ಭಾರತವು ಪಾಕಿಸ್ತಾನದ ಉಗ್ರನೆಲೆಗಳು, ವಾಯುನೆಲೆ ಮತ್ತಿತರ ಕಡೆ ಯೋಜಿತ ದಾಳಿ ನಡೆಸಿತು. ಆದರೆ, ಪಾಕಿಸ್ತಾನಕ್ಕೆ ಭಾರತದ ಒಂದೇ ಒಂದು ನೆಲೆ ಮೇಲೆ ದಾಳಿ ನಡೆಸಲು ಆಗಲಿಲ್ಲ. ಇದು ಭಾರತಕ್ಕೆ ಸಿಕ್ಕ ಸ್ಪಷ್ಟ ಜಯ ಎಂದು ಜಾಗತಿಕ ಯುದ್ಧ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ನಡೆದ ಸೀಮಿತ ಅವಧಿಯ ಸಂಘರ್ಷದ ಕುರಿತು ವಿಶ್ಲೇಷಣೆ ಮಾಡಿರುವ ಮಿಲಿಟರಿ ಚಿಂತಕ, ಅಮೆರಿಕ ಮೂಲದ ಆಧುನಿಕ ಯುದ್ಧ ಸಂಸ್ಥೆಯ ಜಾನ್ ಸ್ಪೆನ್ಸರ್ ಮತ್ತು ಆಸ್ಟ್ರಿಯಾದ ಮಿಲಿಟರಿ ಇತಿಹಾಸಕಾರ ಹಾಗೂ ಹೆಸರಾಂತ ವೈಮಾನಿಕ ಯುದ್ಧದ ವಿಶ್ಲೇಷಕ ಟಾಮ್ ಕೂಪರ್ ಈ ಅಭಿಪ್ರಾಯ ಹೊರಹಾಕಿದ್ದಾರೆ. ಭಾರತವು ಆಪರೇಷನ್ ಸಿಂದೂರದ ಮೂಲಕ ತನ್ನ ವ್ಯಹಾತ್ಮಕ ಉದ್ದೇಶವನ್ನು ಈಡೇರಿಸಿಕೊಂಡಿತು ಎಂದು ಅವರು ತಿಳಿಸಿದ್ದಾರೆ.
ಕೇವಲ ನಾಲ್ಕು ದಿನಗಳ ಯೋಜಿತ ಮಿಲಿಟರಿ ಕಾರ್ಯಾಚರಣೆ ಮೂಲಕ ಭಾರತ ತನ್ನ ದಾಳಿಯ ಉದ್ದೇಶ ಈಡೇರಿಸಿಕೊಂಡಿತು. ಭಾರತವು ಪಾಕಿಸ್ತಾನದ ವಿರುದ್ಧ ಸ್ಪಷ್ಟ ಗೆಲುವು ದಾಖಲಿಸಿತು. ಪಾಕಿಸ್ತಾನಕ್ಕೆ ಭಾರತದ ದಾಳಿ ಎದುರಿಸಲು ಸಾಧ್ಯವಾಗಲಿಲ್ಲ, ಒಂದರ ಹಿಂದೊಂದರಂತೆ ಹಿನ್ನಡೆಯನ್ನು ಪಾಕಿಸ್ತಾನ ಅನುಭವಿಸಿತು.
ಆಪರೇಷನ್ ಸಿಂದೂರವು ಭಯೋತ್ಪಾದಕರ ಮೂಲಸೌಕರ್ಯವನ್ನು ನಾಶ ಮಾಡುವ ಜತೆಗೆ, ಭಾರತದ ಮಿಲಿಟರಿ ಸಾಮರ್ಥ್ಯವನ್ನೂ ತೋರಿಸಿಕೊಟ್ಟಿತು ಮತ್ತು ಹೊಸತೊಂದು ರಾಷ್ಟ್ರೀಯ ಭದ್ರತಾ ಸಿದ್ಧಾಂತಕ್ಕೂ ಭಾಷ್ಯ ಬರೆಯಿತು ಎಂದು ಕೂಪರ್ ಹೇಳಿಕೊಂಡಿದ್ದಾರೆ.
ಆಪರೇಷನ್ ಸಿಂದೂರ ಎಂಬುದು ಯುದ್ಧವಾಗಲಿ, ಪ್ರತೀಕಾರವಾಗಲಿ ಅಲ್ಲ. ಬದಲಾಗಿ ಇದೊಂದು ಸ್ಪಷ್ಟ ಉದ್ದೇಶದೊಂದಿಗಿನ ಸೀಮಿತ ಆಂದೋಲನವಾಗಿದೆ. ಇದರ ಉದ್ದೇಶ ಸಂಪೂರ್ಣವಾಗಿ ಈಡೇರಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿನ ಯಾವುದೇ ಗುರಿ ಮೇಲೆ ದಾಳಿ ಮಾಡಬಲ್ಲ ಸಾಮರ್ಥ್ಯವನ್ನು ಭಾರತ ಪ್ರದರ್ಶಿಸಿತು. ಈ ಮೂಲಕ ಗಡಿಯಾಚೆಗಿನ ಭಯೋತ್ಪಾದನೆಗೆ ಹೊಸತೊಂದು ಎಚ್ಚರಿಕೆಯನ್ನು ರವಾನಿಸಿತು. ಪಾಕಿಸ್ತಾನದ ನೆಲದ ಮೂಲಕ ಇನ್ನು ಮುಂದೆ ನಡೆಯುವ ಯಾವುದೇ ಭಯೋತ್ಪಾದನಾ ಕೃತ್ಯಕ್ಕೆ ಮಿಲಿಟರಿ ಮೂಲಕವೇ ಉತ್ತರಿಸಲಾಗುವುದು ಎಂಬ ಸಂದೇಶ ರವಾನಿಸಲಾಯಿತು. ಇದು ಬೆದರಿಕೆಯಲ್ಲ, ಉದಾಹರಣೆ ಸಹಿತ ವಿವರಮೆ ಎಂದು ಸ್ಪೆನ್ಸರ್ ಅವರು ಭಾರತದ ಕ್ರಮವನ್ನು ವಿಶ್ಲೇಷಿಸಿದ್ದಾರೆ.
ಭಾರತವು ಪ್ರತೀಕಾರಕ್ಕಾಗಿ ಹೋರಾಟ ನಡೆಸಲಿಲ್ಲ, ಬದಲಾಗಿ ಇನ್ನು ಮುಂದೆ ಇಂಥ ದಾಳಿ ಮರುಕಳಿಸಬಾರದು ಎಂದು ಹೋರಾಟ ನಡೆಸಿತು ಎಂದು ತಿಳಿಸಿದ್ದಾರೆ.
ಉಗ್ರರ ನೆಲೆ, ಡ್ರೋನ್ ಸಮನ್ವಯ ಕೇಂದ್ರ, ಏರ್‌ಬೇಸ್‌ಗಳ ಮೇಲೆ ಭಾರತವು ದಾಳಿ ನಡೆಸಿತು. ಆದರೆ ಪಾಕಿಸ್ತಾನಕ್ಕೆ ಕನಿಷ್ಠ ಭಾರತದ ಒಂದೇ ಒಂದು ಭಾಗದ ಮೇಲೆ ದಾಳಿ ಮಾಡಲು ಆಗಲಿಲ್ಲ, ಇದು ಭಾರತೀಯ ಸೇನೆಯ ಶ್ರೇಷ್ಠತೆಗೆ ಸಾಕ್ಷಿ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಭಾರತದ್ದೇ ಮೇಲುಗೈ: ನ್ಯೂಯಾರ್ಕ್ ಟೈಮ್ಸ್
ನ್ಯೂಯಾರ್ಕ್: ಭಾರತ- ಪಾಕ್ ಸಮರದಲ್ಲಿ ಭಾರತ ಮೇಲುಗೈ ಸಾಧಿಸಿದೆ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಬಣ್ಣಿಸಿದೆ. ಈ ಸಂಬಂಧ ಅದು ಭಾರತದ ದಾಳಿಗೆ ಚಿಂದಿಯಾದ ಪಾಕ್ ವಾಯುನೆಲೆಗಳ ಚಿತ್ರ ಹಂಚಿಕೊಂಡಿದೆ. ‘ಭಾರತ ಮತ್ತು ಪಾಕ್ ನಡುವಿನ 4 ದಿನಗಳ ಸಮರ 2 ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವೆ ಅರ್ಧ ಶತಮಾನದಲ್ಲಿ ನಡೆದ ಅತ್ಯಂತ ಪ್ರಬಲ ಹೋರಾಟವಾಗಿತ್ತು. ಎರಡೂ ಕಡೆಯುವರು ಡ್ರೋನ್, ಕ್ಷಿಪಣಿ ಬಳಸಿದ್ದರಿಂದ ತೀವ್ರ ಹಾನಿಯುಂಟು ಮಾಡಿದೆ. ಪಾಕಿಸ್ತಾನದ ಮಿಲಿಟರಿ ಸೌಲಭ್ಯಗಳು ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಳ್ಳುವಲ್ಲಿ ಭಾರತವು ಸ್ಪಷ್ಟವಾದ ಮುನ್ನಡೆಯನ್ನು ಹೊಂದಿರುವಂತೆ ಕಾಣುತ್ತಿದೆ’ ಎಂದು ವರದಿ ಹೇಳಿದೆ.