ಸಾರಾಂಶ
ತೆಲಂಗಾಣದ ಆಸೀಫಾಬಾದ್ ಜಿಲ್ಲೆಯಲ್ಲಿ ಆದಿವಾಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. 2000ಕ್ಕೂ ಹೆಚ್ಚು ಜನರಿದ್ದ ಗುಂಪೊಂದು ಮಸೀದಿ ಮತ್ತು ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದೆ.
ಹೈದರಾಬಾದ್: ಆದಿವಾಸಿ ಮಹಿಳೆಯೊಬ್ಬಳಿಗೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಮತ್ತು ಈ ಸಂಬಂಧ ನಡೆದ ಪ್ರತಿಭಟನೆ ಕೋಮುಗಲಭೆ ಸ್ವರೂಪ ಪಡೆದ ಘಟನೆ ತೆಲಂಗಾಣದ ಆಸೀಫಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಈ ಕೋಮು ಹಿಂಸಾಚಾರದ ವೇಳೆ 2000ಕ್ಕೂ ಹೆಚ್ಚು ಜನರಿದ್ದ ಗುಂಪೊಂದು ಗ್ರಾಮದ ಮಸೀದಿ ಮತ್ತು ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದೆ. ಘಟನೆ ಕುರಿತು ಹೈದ್ರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಕಳವಳ ವ್ಯಕ್ತಪಡಿಸಿದ್ದಾರೆ.ಪ್ರಕರಣ ಹಿನ್ನೆಲೆ:
ಆಸಿಫಾಬಾದ್ ಜಿಲ್ಲೆಯ ಜೈನೂರ್ ಮಂಡಲದಲ್ಲಿ ಮುಸ್ಲಿಂ ಆಟೋರಿಕ್ಷಾ ಚಾಲಕನೊಬ್ಬ ಬುಡಕಟ್ಟು ಮಹಿಳೆಯ ಮೇಲೆ ಲೈಗಿಂಕ ದೌರ್ಜನ್ಯವೆಸಗಿದ್ದ. ಇದನ್ನು ಖಂಡಿಸಿ ಬುಧವಾರ ಬಂದ್‌ಗೆ ಕರೆ ನೀಡಲಾಗಿತ್ತು. ಈ ವೇಳೆ 2000 ಜನರ ಗುಂಪೊಂದು ಜೈನೂರ್ ಗ್ರಾಮದ ಮೇಲೆ ಏಕಾಏಕಿ ಮಸೀದಿ, ಮನೆಗಳ ಮೇಲೆ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.