ಎಲ್ಲ ಕೆಮ್ಮಿನ ಸಿರಪ್‌ ಸಮಗ್ರ ತಪಾಸಣೆ: ಕೇಂದ್ರ ಸೂಚನೆ

| Published : Oct 09 2025, 02:00 AM IST

ಎಲ್ಲ ಕೆಮ್ಮಿನ ಸಿರಪ್‌ ಸಮಗ್ರ ತಪಾಸಣೆ: ಕೇಂದ್ರ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯಪ್ರದೇಶದಲ್ಲಿ ಕಲುಷಿತ ಕೆಮ್ಮಿನ ಸಿರಪ್‌ಗಳಿಂದ 20 ಮಕ್ಕಳ ಸಾವು ಸಂಭವಿಸಿದೆ ಎಂಬ ವರದಿಗಳ ಬೆನ್ನಲ್ಲೇ, ದೇಶದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ), ಎಲ್ಲ ರಾಜ್ಯಗಲ್ಲಿನ ಕೆಮ್ಮಿನ ಔಷಧಗಳ ಸಮಗ್ರ ತಪಾಸಣೆ ನಡೆಸಬೇಕು ಎಂದು ಸೂಚಿಸಿದೆ.

- ಎಲ್ಲ ರಾಜ್ಯಗಳಿಗೆ ಔಷಧ ನಿಯಂತ್ರಕರ ತಾಕೀತುನವದೆಹಲಿ: ಮಧ್ಯಪ್ರದೇಶದಲ್ಲಿ ಕಲುಷಿತ ಕೆಮ್ಮಿನ ಸಿರಪ್‌ಗಳಿಂದ 20 ಮಕ್ಕಳ ಸಾವು ಸಂಭವಿಸಿದೆ ಎಂಬ ವರದಿಗಳ ಬೆನ್ನಲ್ಲೇ, ದೇಶದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ), ಎಲ್ಲ ರಾಜ್ಯಗಲ್ಲಿನ ಕೆಮ್ಮಿನ ಔಷಧಗಳ ಸಮಗ್ರ ತಪಾಸಣೆ ನಡೆಸಬೇಕು ಎಂದು ಸೂಚಿಸಿದೆ.

‘ಪ್ರತಿ ಬ್ಯಾಚ್ ಕಚ್ಚಾ ವಸ್ತು ಮತ್ತು ಸಿದ್ಧಪಡಿಸಿದ ಸೂತ್ರೀಕರಣವನ್ನು (ಫಾರ್ಮುಲೇಶನ್‌) ಬಳಕೆ ಅಥವಾ ಮಾರಾಟ ಮಾಡುವ ಮೊದಲು ಸರಿಯಾಗಿ ಪರೀಕ್ಷಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದೆ.‘ಸದ್ಯ ಉತ್ಪಾದಕರು ಸರಿಯಾದ ತಪಾಸಣೆ ಮಾಡದೇ ಮಾರುಕಟ್ಟೆಗೆ ಔಷಧ ಬಿಡುಗಡೆ ಮಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ರಾಜ್ಯ ಔಷಧ ನಿಯಂತ್ರಕರು ತಪಾಸಣೆ ತೀವ್ರಗೊಳಿಸಬೇಕು ಮತ್ತು ಸರಿಯಾದ ಪರೀಕ್ಷೆಯಿಲ್ಲದೆ ಯಾವುದೇ ಬ್ಯಾಚ್ ಔಷಧ ಬಿಡುಗಡೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಪತ್ರ ಸೂಚಿಸಿದೆ.

==22 ಮಕ್ಕಳ ಬಲಿಪಡೆದ ಸಿರಪ್‌ ಕಂಪನಿಯ ಮಾಲೀಕ ನಾಪತ್ತೆ

- ತಮಿಳ್ನಾಡಿನ ಕೋಲ್ಡ್ರಿಫ್‌ ಔಷಧ ಕಂಪನಿಗೆ ಬೀಗ

- ಔಷಧ ಸೇವಿಸಿದ 5 ಮಕ್ಕಳ ಸ್ಥಿತಿ ಚಿಂತಾಜನಕ

ಪಿಟಿಐ ಚೆನ್ನೈ/ಭೋಪಾಲ್‌ತಮಿಳುನಾಡಿನ ಶ್ರೀಶನ್‌ ಫಾರ್ಮಾಸ್ಯುಟಿಕಲ್‌ ಕಂಪನಿ ತಯಾರಿಸಿದ ಮಾರಕ ಕೋಲ್ಡ್ರಿಫ್‌ ಕೆಮ್ಮಿನೌಷಧ ಸೇವಿಸಿ ಮಧ್ಯಪ್ರದೇಶದ 20 ಮಕ್ಕಳು ಹಾಗೂ ರಾಜಸ್ಥಾನದ 2 ಮಕ್ಕಳು ಮೃತಪಟ್ಟ ಬೆನ್ನಲ್ಲೇ, ಕಾಂಚೀಪುರಂನಲ್ಲಿರುವ ಕಂಪನಿಯ ಕಾರ್ಖಾನೆಗೆ ತಮಿಳುನಾಡು ಸರ್ಕಾರ ಬೀಗಮುದ್ರೆ ಹಾಕಿದೆ. ಇದೇ ವೇಳೆ, ಕಂಪನಿಯ ಮಾಲೀಕ ನಾಪತ್ತೆಯಾಗಿದ್ದು, ಆತನಿಗೆ ಮಧ್ಯಪ್ರದೇಶ ಪೊಲೀಸರು ಹುಡುಕಾಟ ನಡೆಸಿದ್ದಾರೆ.

‘ಮಂಗಳವಾರ ಸಂಜೆ ಕಾರ್ಖಾನೆಗೆ ಬೀಗ ಹಾಕಲಾಗಿದೆ. ಮಧ್ಯಪ್ರದೇಶದ ಪೊಲೀಸರ ತಂಡ ಕಂಪನಿಯ ಮಾಲೀಕನನ್ನು ಬಂಧಿಸಲು ಕಾಂಚೀಪುರಂಗೆ ತೆರಳಿ ಶೋಧ ನಡೆಸಿದೆ. ಮಧ್ಯಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವೂ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸುವ ನಿರೀಕ್ಷೆಯಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಕಂಪನಿ ತಯಾರಿಸಿ ಕೋಲ್ಡ್ರಿಫ್‌ ಔಷಧದಲ್ಲಿ ಕಲಬೆರಿಕೆಯಾಗಿರುವುದನ್ನು ಅ.4ರಂದು ದೃಢಪಡಿಸಿದ್ದ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ತಕ್ಷಣ ಅದರ ಪೂರೈಕೆ ನಿಲ್ಲಿಸುವಂತೆ ಆದೇಶಿಸಿತ್ತು. ಇದೀಗ ಇಡೀ ಕಾರ್ಖಾನೆಗೆ ನಿರ್ಬಂಧ ಹೇರಲಾಗಿದೆ.

ಇನ್ನೈದು ಮಕ್ಕಳು ಗಂಭೀರ:ಈ ನಡುವೆ ಕೋಲ್ಡ್ರಿಫ್‌ ಔಷಧ ಸೇವಿಸಿದ ಮಧ್ಯಪ್ರದೇಶದ ಇನ್ನೈದು ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇಲ್ಲಿಯವರೆಗೆ ಛಿಂದ್ವಾಡದ 17, ಬೇತುಲ್‌ನ 2 ಮತ್ತು ಪಂಧುರ್ನಾದ ಒಂದು ಮಗು ಸೇರಿ ಮಧ್ಯಪ್ರದೇಶದ ಒಟ್ಟು 20 ಮಕ್ಕಳು ಮೃತಪಟ್ಟಿದ್ದಾರೆ.