ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಅಸಮಂಜಸ ಸಂಗತಿಗಳು ಪತ್ತೆ : ಆಯೋಗಕ್ಕೆ ಕಾಂಗ್ರೆಸ್‌ ದೂರು

| Published : Nov 30 2024, 12:49 AM IST / Updated: Nov 30 2024, 04:51 AM IST

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಹಾಗೂ ಎಣಿಕೆ ಸಂದರ್ಭದಲ್ಲಿ ಅತ್ಯಂತ ಗಂಭೀರ ಮತ್ತು ತೀವ್ರ ಸ್ವರೂಪದ ಅಸಮಂಜಸ ಸಂಗತಿಗಳು ಪತ್ತೆಯಾಗಿವೆ ಎಂದು ಕಾಂಗ್ರೆಸ್‌ ನಿಯೋಗ ಶುಕ್ರವಾರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

 ನವದೆಹಲಿ : ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಹಾಗೂ ಎಣಿಕೆ ಸಂದರ್ಭದಲ್ಲಿ ಅತ್ಯಂತ ಗಂಭೀರ ಮತ್ತು ತೀವ್ರ ಸ್ವರೂಪದ ಅಸಮಂಜಸ ಸಂಗತಿಗಳು ಪತ್ತೆಯಾಗಿವೆ ಎಂದು ಕಾಂಗ್ರೆಸ್‌ ನಿಯೋಗ ಶುಕ್ರವಾರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಖುದ್ದಾಗಿ ವಿಚಾರಣೆ ಆಲಿಸಲು ಸಮಯ ನೀಡಿದರೆ ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೀಡುವುದಾಗಿ ಹೇಳಿದೆ.

ಎಐಸಿಸಿ ಮಹಾರಾಷ್ಟ್ರ ಉಸ್ತುವಾರಿ ರಮೇಶ್‌ ಚೆನ್ನಿತ್ತಲ, ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ ನಾನಾ ಪಟೋಲೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್‌ ವಾಸ್ನಿಕ್‌ ನೇತೃತ್ವದಲ್ಲಿ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಸ್ಪಷ್ಟವಾಗಿ ಎದ್ದು ಕಾಣುವಂತಹ ಅಸಮಂಜಸ ಸಂಗತಿಗಳು ಮಹಾರಾಷ್ಟ್ರ ಚುನಾವಣೆ ವೇಳೆ ಗೋಚರವಾಗಿವೆ. ಪಾರದರ್ಶಕ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ಬುಡಕ್ಕೇ ಇವು ಪೆಟ್ಟು ನೀಡುವಂತಿದೆ. ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಈ ಮಾಹಿತಿಯನ್ನು ಒದಗಿಸುತ್ತಿರುವುದಾಗಿ ಈ ನಾಯಕರು ತಿಳಿಸಿದ್ದಾರೆ.

ಕಾಂಗ್ರೆಸ್‌ ದೂರಲ್ಲೇನಿದೆ?

1. ಮಹಾರಾಷ್ಟ್ರ ಚುನಾವಣೆಗೂ ಮುನ್ನ ಸ್ವೇಚ್ಛಾಚಾರದ ರೀತಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಅದೇ ವೇಳೆ ಪ್ರತಿ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯಲ್ಲಿ ಸುಮಾರು 10 ಸಾವಿರ ಮತದಾರರನ್ನು ಸೇರ್ಪಡೆ ಮಾಡಲಾಗಿದೆ.

2. ಜುಲೈ- ನವೆಂಬರ್‌ ಅವಧಿಯಲ್ಲಿ ಹೊಸದಾಗಿ 47 ಲಕ್ಷ ಮತದಾರರು ಮತ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ ಇತಿಹಾಸದಲ್ಲೇ ಇಷ್ಟು ಮತದಾರರು ಸೇರ್ಪಡೆ ಹಿಂದೆಂದೂ ಆಗಿರಲಿಲ್ಲ.

3. ಸರಾಸರಿ 50 ಸಾವಿರ ಮತದಾರರ ಸಂಖ್ಯೆ ಹೆಚ್ಚಳವಾದ 50 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಕೂಟ 47ರಲ್ಲಿ ಗೆಲುವು ಸಾಧಿಸಿದೆ.

4 ನ.20ರಂದು ಮತದಾನದ ದಿನ ಸಂಜೆ 5ಕ್ಕೆ 58.22%ರಷ್ಟು ಮತದಾನವಾಗಿತ್ತು. ಅದೇ ರಾತ್ರಿ 11.30ಕ್ಕೆ ಬಂದ ವರದಿ ಪ್ರಕಾರ ಮತದಾನ ಪ್ರಮಾಣ 65.02%ಕ್ಕೆ ಏರಿಕೆಯಾಗಿದೆ.

5. ಮತದಾನ ಪ್ರಮಾಣವನ್ನು ಚುನಾವಣೆ ದಿನ ಕ್ಷಣಕ್ಷಣಕ್ಕೂ ಪರಿಷ್ಕರಿಸಲಾಗುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಆಗಿರುವುದಕ್ಕೆ ತಾರ್ಕಿಕ ಕಾರಣಗಳು ಇಲ್ಲ ಎಂದು ಸ್ವತಃ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಅವರೇ ತಿಳಿಸಿದ್ದಾರೆ. ಹೀಗಾಗಿ ಚುನಾವಣೆಗೆ ಸಂಬಂಧಿಸಿದಂತೆ ಹಲವು ನೈಜ ಅನುಮಾನಗಳು ವ್ಯಕ್ತವಾಗಿವೆ.

ಚುನಾವಣಾ ಆಯೋಗ ಪಕ್ಷಪಾತಿ: ಕಾಂಗ್ರೆಸ್‌

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಪಕ್ಷಪಾತಿಯಾಗಿ ವರ್ತಿಸುತ್ತಿದೆ. ಪರಿಣಾಮ ದೇಶದ ಚುನಾವಣಾ ವ್ಯವಸ್ಥೆಗೆ ಸಮಗ್ರತೆಗೆ ಧಕ್ಕೆಯಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಶುಕ್ರವಾರ ಇಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಇತ್ತೀಚಿನ ಚುನಾವಣಾ ಫಲಿತಾಂಶ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಕೆಲವೊಂದು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ನಿರ್ಣಯಗಳು

- ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಂವಿಧಾನಿಕ ಹಕ್ಕು. ಆದರೆ ಚುನಾವಣಾ ಆಯೋಗ ಪಕ್ಷಪಾತ ಧೋರಣೆ ತೋರಿಸುತ್ತಿದೆ.

- ಆಯೋಗದ ವರ್ತನೆಯಿಂದ ಚುನಾವಣಾ ಪ್ರಕ್ರಿಯೆ ಸಮಗ್ರತೆಗೆ ಗಂಭೀರವಾಗಿ ಧಕ್ಕೆಯಾಗಿದೆ. ಇದರ ವಿರುದ್ಧ ಶೀಘ್ರ ದೇಶವ್ಯಾಪಿ ಆಂದೋಲನ ಆರಂಭಿಸಲಾಗುವುದು.

- ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಯಾರಿಗೂ ಅರ್ಥವಾಗದಂತದ್ದು. ಇದು ಉದ್ದೇಶಿತವಾಗಿ ಫಲಿತಾಂಶ ತಿರುಚಿದ ಸಂದೇಶಕ್ಕೆ ಕಾರಣವಾಗಿದೆ.- 1991ರ ಪ್ರಾರ್ಥನಾ ಸ್ಥಳಗಳ ವಿಶೇಷ ಕಾಯ್ದೆಯನ್ನು ಕೇಂದ್ರ ಸರ್ಕಾರ ಬಿಜೆಪಿ ಸರ್ಕಾರ ಯಾವುದೇ ಎಗ್ಗಿಲ್ಲದೇ ಉಲ್ಲಂಘಿಸುತ್ತಿದೆ. ಕಾಯ್ದೆಯ ಅಂಶಗಳನ್ನು ಕಾಪಾಡಲು ಕಾಂಗ್ರೆಸ್‌ ಬದ್ಧ.- ಜ್ವಲಂತ ವಿಷಯಗಳಾದ ಉದ್ಯಮ ಹಗರಣ, ಮಣಿಪುರ ಹಿಂಸಾಚಾರ, ಸಂಭಲ್‌ ಹಿಂಸಾಚಾರದ ಬಗ್ಗೆ ಸಂಸತ್‌ನಲ್ಲಿ ಚರ್ಚಿಸು ವಿಷಯದಲ್ಲಿ ಸರ್ಕಾರ ಹಠಿಮಾರಿ ಧೋರಣೆ ತೋರಿದೆ. ಹೀಗಾಗಿ ಕಲಾಪ ಬಲಿಯಾಗುತ್ತಿದೆ.