ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ವಿರುದ್ಧ ಕಾಂಗ್ರೆಸ್‌ ಹೊಸ ಆರೋಪ : 3 ಸಂಸ್ಥೆಗಳಿಂದ ಸಂಬಳ?

| Published : Sep 03 2024, 01:38 AM IST / Updated: Sep 03 2024, 04:34 AM IST

ಸಾರಾಂಶ

ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಅವರು 3 ಸಂಸ್ಥೆಗಳಿಂದ ಏಕಕಾಲಕ್ಕೆ ಸಂಬಳ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. 2017 ರಿಂದ ಸೆಬಿ ಸದಸ್ಯೆಯಾಗಿರುವ ಅವರು, ಐಸಿಐಸಿಐ ಬ್ಯಾಂಕ್‌ ಮತ್ತು ಐಸಿಐಸಿಐ ಪ್ರುಡೆನ್ಷಿಯಲ್‌ನಲ್ಲೂ ಹುದ್ದೆ ಹೊಂದಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

 ನವದೆಹಲಿ : ಹಿಂಡನ್‌ಬರ್ಗ್‌ ವರದಿಯ ಪ್ರಕಾರ ಅಕ್ರಮದ ಆರೋಪ ಹೊತ್ತು ವಿವಾದಕ್ಕೆ ಒಳಗಾಗಿದ್ದ ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ವಿರುದ್ಧ ಕಾಂಗ್ರೆಸ್‌ ಹೊಸ ಆರೋಪ ಹೊರಿಸಿದೆ. ‘ಮಾಧವಿ ಅವರು 3 ಸಂಸ್ಥೆಗಳಿಂದ ಏಕಕಾಲಕ್ಕೆ ಸಂಬಳ ಪಡೆಯುತ್ತಿದ್ದಾರೆ. ಇದು ಹಿತಾಸಕ್ತಿಯ ವೈರುಧ್ಯ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹಾಗೂ ವಕ್ತಾರ ಪವನ್‌ ಖೇರಾ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿದ ರಮೇಶ್‌ ಹಾಗೂ ಖೇರಾ, ‘ಮಾಧವಿ 2017ರಲ್ಲಿ ಸೆಬಿಯಲ್ಲಿ ಸದಸ್ಯೆಯಾಗಿ ಸೇರಿಕೊಂಡಿದ್ದರು. 2022ರಲ್ಲಿ ಅಧ್ಯಕ್ಷೆ ಆಗಿದ್ದರು. 2017ರಲ್ಲಿ ಸೆಬಿ ಸೇರಿದ ಬಳಿಕ ಐಸಿಐಸಿಐ ಬ್ಯಾಂಕ್‌ ಹಾಗೂ ಐಸಿಐಸಿಐ ಪ್ರುಡೆನ್ಷಿಯಲ್‌ನಲ್ಲೂ ಹುದ್ದೆ ಹೊಂದಿದ್ದಾರೆ . 2017ರಿಂದ 24ರವರೆಗೆ ಸೆಬಿಯ ವೇತನವಲ್ಲದೆ ಐಸಿಐಸಿಐನ 2 ಕಂಪನಿಗಳಿಂದ 16.80 ಕೋಟಿ ರು. ವೇತನ ಪಡೆದಿದ್ದಾರೆ. ಹೀಗೆ 3 ಸಂಸ್ಥೆಗಳಿಂದ ಸಂಬಳ ಪಡೆಯುವುದು ಹಿತಾಸಕ್ತಿಯ ವೈರುಧ್ಯ’ ಎಂದು ಆರೋಪಿಸಿದರು.ಅಲ್ಲದೆ, ಮಾಧವಿ ಅವರನ್ನು ನೇಮಿಸಿದ ನೇಮಕಾತಿ ಸಮಿತಿಯ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ. ಹೀಗಾಗಿ ಸೆಬಿ ಅಧ್ಯಕ್ಷೆ ಆದ ಬಳಿಕವೂ ಇನ್ನೊಂದು ಕಂಪನಿಯಿಂದ ಕೋಟಿಗಟ್ಟಲೆ ಸಂಬಳ ಪಡೆದ ಮಾಧವಿ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಹಿಂಡನ್‌ಬರ್ಗ್‌ ವರದಿಯಲ್ಲಿ ಮಾಧವಿ ಅವರು ಅದಾನಿ ಕಂಪನಿ ಜತೆ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆಗ ಕೂಡ ಕಾಂಗ್ರೆಸ್ ಪಕ್ಷ ಅವರ ರಾಜೀನಾಮೆಗೆ ಒತ್ತಾಯಿಸಿತ್ತು. ಆದರೆ ಮಾಧವಿ ಈ ಆಗ್ರಹ ತಳ್ಳಿಹಾಕಿದ್ದರು.