ಮಕ್ಕಳ ಗೊಂಬೆಗಳ ಬಲೆಯಲ್ಲಿ ಬೀಳುತ್ತಾ 8 ಜನರ ಸಾವಿಗೆ ಕಾರಣವಾದ ಬಹ್ರೈಚ್‌ನ ನರಭಕ್ಷಕ ತೋಳಗಳು?

| Published : Sep 03 2024, 01:31 AM IST / Updated: Sep 03 2024, 04:38 AM IST

ಸಾರಾಂಶ

ಬಹ್ರೈಚ್‌ ಜಿಲ್ಲೆಯಲ್ಲಿ 8 ಜನರ ಸಾವಿಗೆ ಕಾರಣವಾದ ತೋಳಗಳನ್ನು ಹಿಡಿಯಲು ಅರಣ್ಯ ಇಲಾಖೆ ಮಕ್ಕಳ ಮೂತ್ರದಲ್ಲಿ ಅದ್ದಿದ ಗೊಂಬೆಗಳನ್ನು ಬಳಸುತ್ತಿದೆ. ತೋಳಗಳನ್ನು ಸೆಳೆಯಲು ಮತ್ತು ಬಲೆಗೆ ಬೀಳಿಸಲು ಈ ವಿನೂತನ ವಿಧಾನವನ್ನು ಅನುಸರಿಸಲಾಗುತ್ತಿದೆ.

 ಬಹ್ರೈಚ್‌ (ಉ.ಪ್ರ.): ಬಹ್ರೈಚ್‌ ಜಿಲ್ಲೆಯಲ್ಲಿ 15 ದಿನದಲ್ಲಿ 8 ಜನರ ಕೊಂದಿರುವ ತೋಳಗಳನ್ನು ಹಿಡಿವ ನಿಟ್ಟಿನಲ್ಲಿ ಇಲ್ಲಿನ ಅರಣ್ಯ ಇಲಾಖೆ ವಿನೂತನ ಕ್ರಮಕ್ಕೆ ಮುಂದಾಗಿದೆ. ಮಕ್ಕಳ ಮೂತ್ರದಲ್ಲಿ ಅದ್ದಿದ ಬಣ್ಣಬಣ್ಣದ ಮಕ್ಕಳ ಗೊಂಬೆಗಳನ್ನು ಇಟ್ಟು ತೋಳಗಳ ಹಿಡಿಯಲು ಉಪಾಯ ಹೂಡಲಾಗಿದೆ.

ಈ ಗೊಂಬೆಗಳನ್ನು ನದಿ ದಡದ ಬಳಿ, ತೋಳಗಳ ವಿಶ್ರಾಂತಿ ಸ್ಥಳಗಳು ಮತ್ತು ಗುಹೆಗಳ ಹತ್ತಿರ ಇರಿಸಲಾಗುತ್ತದೆ. ನೈಸರ್ಗಿಕ ಮಾನವ ಪರಿಮಳವನ್ನು ಅನುಕರಿಸಲು ಮಕ್ಕಳ ಮೂತ್ರದಲ್ಲಿ ನೆನೆಸಲಾಗುತ್ತದೆ. ಮೂತ್ರದ ವಾಸನೆ ಹಿಡಿದು ಬರುವ ತೋಳಗಳನ್ನು ಬಂಧಿಸಲು ಹತ್ತಿರದಲ್ಲೇ ಪಂಜರ ಇಡಲಾಗುತ್ತದೆ.‘ತೋಳಗಳು ನಿರಂತರವಾಗಿ ತಮ್ಮ ಸ್ಥಳ ಬದಲಾಯಿಸುತ್ತವೆ. ಸಾಮಾನ್ಯವಾಗಿ ರಾತ್ರಿಯಲ್ಲಿ ಬೇಟೆಯಾಡುತ್ತವೆ ಮತ್ತು ಬೆಳಿಗ್ಗೆ ತಮ್ಮ ಗುಹೆಗಳಿಗೆ ಮರಳುತ್ತವೆ. ನಮ್ಮ ತಂತ್ರವು ಅವುಗಳನ್ನು ದಾರಿತಪ್ಪಿಸಿ ಬಲೆ ಅಥವಾ ಪಂಜರದ ಕಡೆಗೆ ಸೆಳೆವುದಾಗಿದೆ’ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಬಾಲಕಿ ಸಾವು, ಮಹಿಳೆಗೆ ಗಾಯ:

ಈ ನಡುವೆ ಬಹ್ರೈಚ್‌ ಜಿಲ್ಲೆಯ ಜಿಲ್ಲೆಯ ಮಹ್ಸಿ ಎಂಬಲ್ಲಿ ಸೋಮವಾರ 2 ಪ್ರತ್ಯೇಕ ತೋಳ ದಾಳಿಗಳು ಸಂಭವಿಸಿವೆ. ದಾಳಿಗಳಲ್ಲಿ 2.5 ವರ್ಷದ ಬಾಲಕಿ ಸಾವನ್ನಪ್ಪಿದ್ದು, 70 ವರ್ಷದ ಮಹಿಳೆ ಗಾಯಗೊಂಡಿದ್ದಾರೆ.

ಜು.17ರಿಂದ ಬಹ್ರೈಚ್‌ ಜಿಲ್ಲೆಯಲ್ಲಿ ತೋಳ ದಾಳಿಗೆ 7 ಮಕ್ಕಳು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 30 ಮಂದಿ ಗಾಯಗೊಂಡಿದ್ದಾರೆ.