ಸಾರಾಂಶ
ದೇಡ್ (ಮಹಾರಾಷ್ಟ್ರ): ‘ಇತ್ತೀಚೆಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ‘ಭಾರತದ ಸಂವಿಧಾನ’ ಎಂದು ಖಾಲಿ ಪುಟಗಳ ಪುಸ್ತವನ್ನು ಹಂಚಿಕೆ ಮಾಡಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ’ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಈ ಮೂರ್ಖತನ ಮತ್ತು ರಾಜಕೀಯ ನಾಟಕದಿಂದ ಇಡೀ ದೇಶವೇ ಆಘಾತಕ್ಕೆ ಒಳಗಾಗಿದೆ. ಎಸ್‌ಸಿ-ಎಸ್‌ಟಿ, ದಲಿತರು ಮತ್ತು ಆದಿವಾಸಿಗಳ ಒಗ್ಗಟ್ಟಿನಿಂದ ಕಾಂಗ್ರೆಸ್ ಕೆಲವು ವರ್ಷಗಳಿಂದ ತನ್ನ ಬೆಂಬಲಿಗರನ್ನು ಕಳೆದುಕೊಳ್ಳುತ್ತಿದೆ’ ಎಂದರು.
ಸಂವಿಧಾನ ರಕ್ಷಣೆಗಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿತರಿಸಲಾಗಿದ್ದ ಸಂವಿಧಾನದ ಖಾಲಿ ಪ್ರತಿಗಳ ವಿಡಿಯೋವೊಂದು ವೈರಲ್ ಆಗಿತ್ತು.
ಏಕ್ ಹೈ ತೋ ಸೇಫ್ ಹೈ:‘ದಲಿತರು ಮತ್ತು ಹಿಂದುಳಿದ ಗುಂಪುಗಳನ್ನು ಒಗ್ಗೂಡಿಸಲು ಬಿಡದೆ ಜಾತಿ ಮತ್ತು ಸಮುದಾಯಗಳನ್ನು ಎತ್ತಿಕಟ್ಟುವುದು ಕಾಂಗ್ರೆಸ್ ಯೋಜನೆಯಾಗಿದೆ, ಆದರೆ ಹರ್ಯಾಣದ ಜನರು ‘ಏಕ್ ಹೈ ತೋ ಸೇಫ್ ಹೈ’ (ನಾವು ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ) ಎಂಬ ತಂತ್ರ ಅನುಸರಿಸಿ ಈ ಪಿತೂರಿಯನ್ನು ವಿಫಲಗೊಳಿಸಿದ್ದಾರೆ. ಮಹಾರಾಷ್ಟ್ರದಲ್ಲೂ ಇದೇ ಪುನರಾವರ್ತನೆ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸಬೇಕೆಂಬ ವಿರೋಧ ಪಕ್ಷದ ಬೇಡಿಕೆಯನ್ನು ಪ್ರಸ್ತಾಪಿಸಿದ ಮೋದಿ, ‘ಕಾಂಗ್ರೆಸಿಗರು 370 ನೇ ವಿಧಿಯನ್ನು ಏಕೆ ಇಷ್ಟು ಪ್ರೀತಿಸುತ್ತಿದ್ದಾರೆ? ಎಂದು ಪ್ರಶ್ನಿಸಿದರು.ಮಹಾರಾಷ್ಟ್ರದಲ್ಲಿ ಮಹಾಯುತಿ ಹವಾ ಇದ್ದು, ಈ ಬಾರಿಯೂ ಮಹಾಯುತಿ ಮೈತ್ರಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.