ಸಾರಾಂಶ
ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಗಳು ಸುಳ್ಳಿನ ಕಂತೆಗಳಾಗಿದ್ದು, ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡಲು ಯತ್ನಿಸುತ್ತಿದೆ. ಜೊತೆಗೆ ಪ್ರಣಾಳಿಕೆಯಲ್ಲಿ ನ್ಯೂಯಾರ್ಕ್ ಹಾಗೂ ಥಾಯ್ಲೆಂಡ್ ಪೋಟೋಗಳನ್ನು ಬಳಸಲಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸುಧಾನ್ಷು ತ್ರಿವೇದಿ, ಮತದಾರರಲ್ಲಿ ಗೊಂದಲ ಉಂಟುಮಾಡುವಂತಹ ಪ್ರಣಾಳಿಕೆಗಳನ್ನು ಕಾಂಗ್ರೆಸ್ ಘೋಷಿಸಿದೆ. ದಶಕಗಳಿಂದ ಆಧಿಕಾರದಲ್ಲಿದ್ದ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸರಿರಲಿಲ್ಲ. ಈಗ ನ್ಯಾಯದ ಬಗ್ಗೆ ಮಾತನಾಡುತ್ತಿದೆ ಎಂದು ದೂರಿದರು.
ಪ್ರಣಾಳಿಕೆಯಲ್ಲಿ ಬಳಸಿರುವ ಫೋಟೊಗಳು ನ್ಯೂಯಾರ್ಕ್, ಥಾಯ್ಲೆಂಡ್ ಫೋಟೋಗಳಾಗಿದ್ದು, ಕಾಂಗ್ರೆಸ್‌ನ ಗಂಭೀರತೆಯನ್ನು ಮತದಾರರೇ ಅರ್ಥ ಮಾಡಿಕೊಳ್ಳಬೇಕು ಎಂದರು.
ಪರಿಸರ ವಿಭಾಗದಲ್ಲಿ ಬಳಸಲಾದ ಫೋಟೋವನ್ನು ತೋರಿಸಿದ ತ್ರಿವೇದಿ, ರಾಹುಲ್ ಗಾಂಧಿಯವರ ನೆಚ್ಚಿನ ತಾಣವಾದ ಥಾಯ್ಲೆಂಡ್‌ನ ಫೋಟೋ ಇದಾಗಿದೆ. ತಮ್ಮ ಪಕ್ಷದ ಪ್ರಣಾಳಿಕೆಯನ್ನು ಯಾರು ತಯಾರಿಸುತ್ತಿದ್ದಾರೆ ಎಂಬುದನ್ನು ಪಕ್ಷವೇ ತಿಳಿದುಕೊಂಡಿಲ್ಲ. ಅಂಥದ್ದರಲ್ಲಿ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂಬುದು ಎಷ್ಟರ ಮಟ್ಟಿಗೆ ನಂಬಬೇಕು ಎಂದು ಹಾಸ್ಯವಾಡಿದರು.