ಬಿಜೆಪಿ ಸಂಸದ ಸಂಬಿತ್ ಪಾತ್ರಾಗೆ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಕಾಂಗ್ರೆಸ್‌ ನೋಟಿಸ್

| Published : Dec 07 2024, 12:31 AM IST / Updated: Dec 07 2024, 06:49 AM IST

ಸಾರಾಂಶ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ‘ಅತ್ಯುನ್ನತ ದೇಶದ್ರೋಹಿ’ ಎಂದು ಕರೆದಿದ್ದ ಬಿಜೆಪಿ ಸಂಸದ ಸಂಬಿತ್ ಪಾತ್ರಾ ವಿರುದ್ಧ ಕಾಂಗ್ರೆಸ್ ಸಂಸದ ಹೈಬಿ ಈಡನ್ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ್ದಾರೆ.

 ನವದೆಹಲಿ : ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ‘ಅತ್ಯುನ್ನತ ದೇಶದ್ರೋಹಿ’ ಎಂದು ಕರೆದಿದ್ದ ಬಿಜೆಪಿ ಸಂಸದ ಸಂಬಿತ್ ಪಾತ್ರಾ ವಿರುದ್ಧ ಕಾಂಗ್ರೆಸ್ ಸಂಸದ ಹೈಬಿ ಈಡನ್ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ್ದಾರೆ.‘ರಾಹುಲ್‌ ಬಗ್ಗೆ ಪಾತ್ರ ಆಡಿದ ಮಾತುಗಳು ಸಂಪೂರ್ಣವಾಗಿ ಮಾನನಷ್ಟಕರವಾಗಿವೆ ಮತ್ತು ಅಸಂಸದೀಯ ಪದಗಳಾಗಿವೆ. ಇದು ಸದನದ ನಿಯಮಗಳ ಹಾಗೂ ಸಾಂವಿಧಾನಿಕ ಮಾನದಂಡದ ಸ್ಪಷ್ಟ ಉಲ್ಲಂಘನೆ ಆಗಿದೆ’ ಎಂದು ನೋಟಿಸ್‌ನಲ್ಲಿ ಹೈಬಿ ಹೇಳಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಕೆಲವು ವರದಿ ಮಾಡಿದ್ದ ಅಮೆರಿಕ ಮಾಧ್ಯಮಗಳ, ಅಮೆರಿಕ ಉದ್ಯಮಿ ಜಾರ್ಜ್‌ ಸೊರೋಸ್‌ ಹಾಗೂ ರಾಹುಲ್‌ ಗಾಂಧಿಗೂ ನಂಟು ಇದೆ ಎಂದು ಫ್ರೆಂಚ್‌ ಪತ್ರಿಕೆಯೊಂದರ ವರದಿ ಆಧರಿಸಿ ಉಲ್ಲೇಖಿಸಿದ್ದ ಸಂಬಿತ್‌ ಪಾತ್ರ, ರಾಹುಲ್‌ರನ್ನು ‘ಅತ್ಯುನ್ನತ ದೇಶದ್ರೋಹಿ’ ಎಂದು ಕರೆದಿದ್ದರು.

ಕಾಂಗ್ರೆಸ್‌ ತಿರುಗೇಟು:

ಈ ನಡುವೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರೆ ರಾಗಿಣಿ ನಾಯಕ್‌, ‘ರಾಹುಲ್‌ಗೆ ದೇಶದ್ರೋಹಿ ಪಟ್ಟ ಕಟ್ಟಿರುವ ಬಿಜೆಪಿ ಈ ದೇಶದ ಅತಿದೊಡ್ಡ ಟುಕ್ಡೇ ಟುಕ್ಡೇ ಗ್ಯಾಂಗ್‌ ಆಗಿದೆ. ಜನರಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದೆ’ ಎಂದು ತಿರುಗೇಟು ನೀಡಿದರು.

ಪ್ರಿಯಾಂಕಾ ಗಾಂಧಿ ಮಾತನಾಡಿ, ‘ನನ್ನ ಸೋದರಗೆ ದೇಶಕ್ಕಿಂತ ಮಿಗಿಲಾದದ್ದು ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.