ಹರ್ಯಾಣ ವಿಧಾನಸಭೆ ಚುನಾವಣೆ ವೇಳೆ ಅಕ್ರಮ - ಆಧಾರ ರಹಿತ ಆರೋಪ ಬೇಡ : ಕಾಂಗ್ರೆಸ್‌ಗೆ ಆಯೋಗ ಚಾಟಿ

| Published : Oct 30 2024, 12:33 AM IST / Updated: Oct 30 2024, 06:38 AM IST

ಸಾರಾಂಶ

ಹರ್ಯಾಣ ವಿಧಾನಸಭೆ ಚುನಾವಣೆ ವೇಳೆ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್‌ನ ಆರೋಪವನ್ನು ಮತ್ತೊಮ್ಮೆ ಸ್ಪಷ್ಟವಾಗಿ ತಳ್ಳಿಹಾಕಿರುವ ಕೇಂದ್ರ ಚುನಾವಣಾ ಆಯೋಗ, ಮುಂಚಿನಂತೆ ಈಗಲೂ ಚುನಾವಣಾ ಫಲಿತಾಂಶದ ಬಗ್ಗೆ ಊಹಾಪೋಹದ ಸಂದೇಹ ವ್ಯಕ್ತಪಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ: ಹರ್ಯಾಣ ವಿಧಾನಸಭೆ ಚುನಾವಣೆ ವೇಳೆ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್‌ನ ಆರೋಪವನ್ನು ಮತ್ತೊಮ್ಮೆ ಸ್ಪಷ್ಟವಾಗಿ ತಳ್ಳಿಹಾಕಿರುವ ಕೇಂದ್ರ ಚುನಾವಣಾ ಆಯೋಗ, ಮುಂಚಿನಂತೆ ಈಗಲೂ ಚುನಾವಣಾ ಫಲಿತಾಂಶದ ಬಗ್ಗೆ ಊಹಾಪೋಹದ ಸಂದೇಹ ವ್ಯಕ್ತಪಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಹರ್ಯಾಣ ವಿಧಾನಸಭಾ ಚುನಾವಣೆ ಮತ ಎಣಿಕೆ ಕುರಿತ ಘಟನಾವಳಿಗಳ ಕುರಿತು ಸಂದೇಹ ವ್ಯಕ್ತಪಡಿಸಿ, ಕಾಂಗ್ರೆಸ್‌ ನಿಯೋಗವೊಂದು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಈ ಕುರಿತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಆಯೋಗ, ‘ರಾಷ್ಟ್ರೀಯ ಪಕ್ಷವೊಂದರಿಂದ ಇಂಥ ನಿರೀಕ್ಷೆಯಿರಲಿಲ್ಲ. ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲದೆ ಆರೋಪಿಸಿ ಸಂದೇಹ ಹುಟ್ಟುಹಾಕುತ್ತಿದೆ. ಇದರಿಂದ ಮತದಾನ ಅಥವಾ ಮತ ಎಣಿಕೆಯ ವೇಳೆಯಲ್ಲಿ ವಿನಾಕಾರಣ ಗದ್ದಲ ಸೃಷ್ಟಿಯಾಗುವ ಸಾಧ್ಯೆತೆ ಇದೆ. ಆದ್ದರಿಂದ ಪಕ್ಷದ ನಿಲುವಿಗೆ ಹೊಂದಿಕೆಯಾಗುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದಿದೆ.

ಜೊತೆಗೆ, ‘ಚುನಾವಣಾ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಪಕ್ಷಗಳು ನೀಡುವ ಸಲಹೆಗಳನ್ನು ಪರಿಗಣಿಸಿ ಸಮಸ್ಯೆಗಳನ್ನು ಸಕಾಲಿಕವಾಗಿ ಪರಿಹರಿಸಲಾಗುವುದು’ ಎಂಬ ಭರವಸೆಯನ್ನೂ ನೀಡಿದೆ.