ಅಮೇಠಿ ಬಿಟ್ಟು ರಾಯ್‌ ಬರೇಲಿಗೆ ರಾಹುಲ್‌ ಸ್ಪರ್ಧೆ ಶಿಫ್ಟ್‌!

| Published : May 04 2024, 01:37 AM IST / Updated: May 04 2024, 05:00 AM IST

ಅಮೇಠಿ ಬಿಟ್ಟು ರಾಯ್‌ ಬರೇಲಿಗೆ ರಾಹುಲ್‌ ಸ್ಪರ್ಧೆ ಶಿಫ್ಟ್‌!
Share this Article
  • FB
  • TW
  • Linkdin
  • Email

ಸಾರಾಂಶ

ಮಹತ್ವದ ವಿದ್ಯಮಾನವೊಂದರಲ್ಲಿ ಕಾಂಗ್ರೆಸ್‌ನ ಗಾಂಧಿ ಕುಟುಂಬವು 25 ವರ್ಷಗಳ ನಂತರ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ ಹಿಂದೆ ಸರಿದಿದೆ. 

 ರಾಯ್‌ಬರೇಲಿ/ನವದೆಹಲಿ:  ಮಹತ್ವದ ವಿದ್ಯಮಾನವೊಂದರಲ್ಲಿ ಕಾಂಗ್ರೆಸ್‌ನ ಗಾಂಧಿ ಕುಟುಂಬವು 25 ವರ್ಷಗಳ ನಂತರ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ ಹಿಂದೆ ಸರಿದಿದೆ. ಚುನಾವಣಾ ರಾಜಕೀಯಕ್ಕೆ ಇಳಿದ ನಂತರ ರಾಹುಲ್‌ ಗಾಂಧಿ ಅವರು ಇದೇ ಮೊದಲ ಬಾರಿ ಅಮೇಠಿ ಕ್ಷೇತ್ರದ ಬದಲು ತಾಯಿ ಸ್ಪರ್ಧಿಸುತ್ತಿದ್ದ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ ರಾಯ್‌ಬರೇಲಿಯಿಂದ ಕಣಕ್ಕೆ ಇಳಿದಿದ್ದಾರೆ. 

ಇದೇ ವೇಳೆ ಅಮೇಠಿಯಿಂದ 4 ದಶಕಗಳ ಗಾಂಧಿ ಕುಟುಂಬದ ಪರಮಾಪ್ತ ಕೆ.ಎಲ್‌. ಶರ್ಮಾ ಅಖಾಡಕ್ಕೆ ಧುಮುಕಿದ್ದಾರೆ.ರಾಹುಲ್ ಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಹಾಗೂ ಶರ್ಮಾ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಶುಕ್ರವಾರ ಬೆಳಗ್ಗೆ ಘೋಷಣೆ ಆಯಿತು. 

ಇದರೊಂದಿಗೆ ರಾಯ್‌ಬರೇಲಿಯಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವರು ಎಂಬ ನಿರೀಕ್ಷೆ ಸುಳ್ಳಾಯಿತು.ಈಗಾಗಲೇ ಕೇರಳದ ವಯನಾಡ್‌ನಿಂದ ಸ್ಪರ್ಧಿಸಿರುವ ರಾಹುಲ್‌ 2ನೇ ಕ್ಷೇತ್ರವಾದ ಅಮೇಠಿ ಬಿಟ್ಟು ರಾಯ್‌ಬರೇಲಿಗೆ ಹೋಗಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಟೀಕಿಸಿ, ‘ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ’ ಎಂದು ಲೇವಡಿ ಮಾಡಿದ್ದಾರೆ. ಆದರೆ ನಿರ್ಣಯವನ್ನು ಕಾಂಗ್ರೆಸ್‌ ಸಮರ್ಥಿಸಿಕೊಂಡಿದೆ.

ಕುಟುಂಬದ ಜತೆ ರಾಗಾ ನಾಮಪತ್ರ:

ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಕಾರಣ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ರಾಹುಲ್‌ ಅವರು ತಾಯಿ ಸೋನಿಯಾ ಗಾಂಧಿ, ತಂಗಿ ಪ್ರಿಯಾಂಕಾ ಗಾಂಧಿ, ಪ್ರಿಯಾಂಕಾ ಪತಿ ರಾಬರ್ಟ್‌ ವಾದ್ರಾ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ರಾಯ್‌ಬರೇಲಿಯಿಂದ ನಾಮಪತ್ರ ಸಲ್ಲಿಸಿದರು.

 ಇಡೀ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್‌ ಘಟಾನುಘಟಿಗಳು ರಾಯ್‌ಬರೇಲಿಗೆ ಬಂದಿದ್ದರಿಂದ ಭಾರಿ ಸಂಖ್ಯೆಯ ಕಾಂಗ್ರೆಸ್ ಹಾಗೂ ಮಿತ್ರಪಕ್ಷವಾದ ಸಮಾಜವಾದಿ ಪಾರ್ಟಿ ಕಾರ್ಯಕರ್ತರು ಜಮಾಯಿಸಿದ್ದರು ಹಾಗೂ ಜೈಕಾರಗಳನ್ನು ಕೂಗಿದರು. ರಾಯ್ ಬರೇಲಿಯಿಂದ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಅಭ್ಯರ್ಥಿ ಎಂದು ಬಿಜೆಪಿ ಗುರುವಾರ ಘೋಷಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಸಿಂಗ್‌ ಅವರು ಸೋನಿಯಾ ಗಾಂಧಿ ವಿರುದ್ಧ ಸೋತಿದ್ದರು.

ಅಮೇಠಿಗೆ ಶರ್ಮಾ:

ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ನಿಷ್ಠಾವಂತ ಕಿಶೋರಿ ಲಾಲ್ ಶರ್ಮಾ ಶುಕ್ರವಾರ ರಾಯ್‌ಬರೇಲಿಯಿಂದ 62 ಕಿ.ಮೀ. ದೂರದಲ್ಲಿರುವ ಅಮೇಠಿ ಲೋಕಸಭಾ ಕ್ಷೇತ್ರದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಅವರು ಬಿಜೆಪಿಯ ಹಿರಿಯ ನಾಯಕಿ ಹಾಗೂ ಸಚಿವೆ ಸ್ಮೃತಿ ಇರಾನಿಗೆ ಸಡ್ಡು ಹೊಡೆದಿದ್ದಾರೆ.ಶರ್ಮಾ ನಾಮಪತ್ರ ಸಲ್ಲಿಸುವ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಮಾತ್ರ ಇದ್ದರು. ಘಟಾನುಘಟಿ ನಾಯಕರಾರೂ ಇರಲಿಲ್ಲ.

ಗಾಂಧಿ ಭದ್ರಕೋಟೆಗಳು:ರಾಯ್ ಬರೇಲಿಯನ್ನು ಕಾಂಗ್ರೆಸ್‌ಗೆ ಅತ್ಯಂತ ಸುರಕ್ಷಿತ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಇದುವರೆಗೆ ಸಾಕ್ಷಿಯಾಗಿರುವ 20 ಚುನಾವಣೆಗಳಲ್ಲಿ, ಕಾಂಗ್ರೆಸ್ 17 ಅನ್ನು ಗೆದ್ದಿದೆ. ಆದಾಗ್ಯೂ, ತುರ್ತು ಪರಿಸ್ಥಿತಿಯ ನಂತರ 1977ರ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಇಂದಿರಾ ಗಾಂಧಿಯನ್ನು ಜನತಾ ಪಕ್ಷದ ರಾಜ್ ನಾರಾಯಣ್ ಸೋಲಿಸಿದ್ದರು. ಈ ಹಿಂದೆ, ಈ ಸ್ಥಾನವನ್ನು ರಾಹುಲ್‌ ಗಾಂಧಿ ಗಾಂಧಿಯವರ ಅಜ್ಜ ಮತ್ತು ಇಂದಿರಾ ಗಾಂಧಿಯವರ ಪತಿ ಫಿರೋಜ್ ಗಾಂಧಿ ಪ್ರತಿನಿಧಿಸಿದ್ದರು. ವಯಸ್ಸಾಗಿರುವ ಕಾರಣ ಈಗ ಈ ಕ್ಷೇತ್ರದಿಂದ ಸೋನಿಯಾ ಗಾಂಧಿ ಹಿಂದೆ ಸರಿದು ರಾಜ್ಯಸಭೆ ಸೇರಿಕೊಂಡಿದ್ದಾರೆ.

ರಾಯ್‌ಬರೇಲಿಯಂತೆಯೇ ಅಮೇಠಿ ಕೂಡ ವರ್ಷಗಳಿಂದ ಗಾಂಧಿ ಕುಟುಂಬದ ಭದ್ರಕೋಟೆಯಾಗಿದೆ ಮತ್ತು ಇದುವರೆಗೆ 4 ಗಾಂಧಿಗಳು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರು ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ. ಆದರೆ ಕಳೆದ ಬಾರಿ ಬಿಜೆಪಿಯ ಸ್ಮೃತಿ ಇರಾನಿ, ಈ ಕ್ಷೇತ್ರದಲ್ಲಿ ಗೆದ್ದು ಗಾಂಧಿ ಭದ್ರಕೋಟೆ ಭೇದಿಸಿದ್ದರು 

ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಖುಷಿ ನೀಡಿದೆ :  ಕಾಂಗ್ರೆಸ್ ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು 1987 ರಲ್ಲಿ ಯುವ ಕಾಂಗ್ರೆಸ್ ಸದಸ್ಯನಾಗಿ ಇಲ್ಲಿಗೆ ಬಂದೆ ಮತ್ತು ಅಲ್ಲಿಂದ ನಾನು ಇಲ್ಲಿದ್ದೇನೆ. ನಾನು ನನ್ನ ವೃತ್ತಿಜೀವನವನ್ನು ರಾಜೀವ್ ಗಾಂಧಿ ಅವರೊಂದಿಗೆ ಪ್ರಾರಂಭಿಸಿದೆ. 1987ರಲ್ಲಿ ರಾಜೀವ್‌ಜಿ ನನ್ನನ್ನು ಇಲ್ಲಿಗೆ ಕರೆತಂದರು, ನಂತರ ನಾನು ಇಲ್ಲಿಯೇ ಉಳಿದೆ.

- ಕೆ.ಎಲ್‌. ಶರ್ಮಾ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿ/ ಗಾಂಧಿ ಕುಟುಂಬದ ಆಪ್ತ 

ಶರ್ಮಾ ಅವರು ನಮ್ಮ ಕುಟುಂಬದೊಂದಿಗೆ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಅವರು ಅಮೇಠಿ ಮತ್ತು ರಾಯ್ ಬರೇಲಿಯ ಜನರ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಸಾರ್ವಜನಿಕ ಸೇವೆಗಾಗಿ ಅವರ ಉತ್ಸಾಹವು ಒಂದು ಉದಾಹರಣೆಯಾಗಿದೆ. 40 ವರ್ಷದಿಂದ ಅವರು ಇಲ್ಲೇ ಇದ್ದಾರೆ. ಅವರಿಗೆ ಅಮೇಠಿಯ ಗಲ್ಲಿ ಗಲ್ಲಿಗಳೂ ಗೊತ್ತು. ಕಾಂಗ್ರೆಸ್ ಅವರನ್ನು ಅಭ್ಯರ್ಥಿ ಎಂದು ಹೆಸರಿಸಿರುವುದು ಹರ್ಷದಾಯಕವಾಗಿದೆ. ಸಮರ್ಪಣೆ ಮತ್ತು ಕರ್ತವ್ಯ ಪ್ರಜ್ಞೆಯು ಈ ಚುನಾವಣೆಯಲ್ಲಿ ಖಂಡಿತವಾಗಿಯೂ ಅವರಿಗೆ ಯಶ ತರಲಿದೆ.

- ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ ನಾಯಕಿ