ದೇಶಾದ್ಯಂತ ಕಾಂಗ್ರೆಸ್‌ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ

| Published : Jan 24 2024, 02:00 AM IST

ಸಾರಾಂಶ

2024 ರ ಚುನಾವಣೆಗಾಗಿ ದೇಶದೆಲ್ಲೆಡೆ ಸಮಾವೇಶಗಳ ಆಯೋಜನೆಗೆ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ. ನಾಳೆ ತೆಲಂಗಾಣದಲ್ಲಿ ಮೊದಲ ಸಮಾವೇಶ ನಡೆಯಲಿದೆ. ಎಲ್ಲ ಸಭೆಗೆ ಖರ್ಗೆ ಅಧ್ಯಕ್ಷತೆ ವಹಿಸಲಿದ್ದಾರೆ.

ಪಿಟಿಐ ನವದೆಹಲಿ2024ರ ಸಾರ್ವತ್ರಿಕ ಚುನಾವಣಾ ಸಮರಕ್ಕೆ ಸಿದ್ಧವಾಗುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶಗಳನ್ನು ದೇಶಾದ್ಯಂತ ಕೈಗೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಸಮಾವೇಶಗಳಿಗೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರೇ ಅಧ್ಯಕ್ಷತೆ ವಹಿಸಲಿದ್ದಾರೆ. ಇಂತಹ ಮೊದಲ ಸಭೆ ಗುರುವಾರದಿಂದಲೇ ಆರಂಭವಾಗಲಿದ್ದು, ತೆಲಂಗಾಣದಲ್ಲಿ ಮೊದಲ ರಾಜ್ಯ ಮಟ್ಟದ ಕಾಂಗ್ರೆಸ್‌ ಸಮಾವೇಶ ಆಯೋಜನೆಯಾಗಿದೆ.ಸಂಘಟನಾ ಕಾರ್ಯಕರ್ತರಿಗೆ ಶಕ್ತಿ ತುಂಬುವ ಉದ್ದೇಶದಿಂದ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಪಕ್ಷ ಹೇಳಿದೆ. ಗುರುವಾರ ತೆಲಂಗಾಣದಲ್ಲಿ, ಜ.28ರಂದು ಉತ್ತರಾಖಂಡದಲ್ಲಿ, ಜ.29ರಂದು ಒಡಿಶಾದಲ್ಲಿ, ಫೆ.3 ರಂದು ದೆಹಲಿಯಲ್ಲಿ, ಫೆ.4 ರಂದು ಕೇರಳದಲ್ಲಿ, ಫೆ.10 ರಂದು ಹಿಮಾಚಲ ಪ್ರದೇಶದಲ್ಲಿ, ಫೆ.11 ರಂದು ಪಂಜಾಬ್‌ನಲ್ಲಿ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಲಾಗುತ್ತದೆ. ಫೆ.13 ರಂದು ತಮಿಳುನಾಡು ಮತ್ತು ಫೆ.15 ರಂದು ಜಾರ್ಖಂಡ್‌ನಲ್ಲಿ ರ್‍ಯಾಲಿಗಳು ನಡೆಯಲಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಮಂಗಳವಾರ ಹೇಳಿದ್ದಾರೆ.ಈ ಎಲ್ಲ ಸಭೆಗಳ ಅಧ್ಯಕ್ಷತೆಯನ್ನು ಖರ್ಗೆ ಅವರೇ ವಹಿಸಲಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಚುನಾವಣೆಗೆ ಅಣಿಯಾಗಲು ಹುರಿದುಂಬಿಸಲಿದ್ದಾರೆ ಎಂದರು.