ಚುನಾವಣಾ ಬಾಂಡ್‌ ರೀತಿ ಪಿಎಂ ಕೇರ್ಸ್‌ ಹಗರಣ: ಕಾಂಗ್ರೆಸ್‌

| Published : Mar 19 2024, 12:50 AM IST / Updated: Mar 19 2024, 11:26 AM IST

ಚುನಾವಣಾ ಬಾಂಡ್‌ ರೀತಿ ಪಿಎಂ ಕೇರ್ಸ್‌ ಹಗರಣ: ಕಾಂಗ್ರೆಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಬಾಂಡ್‌ ರಹಸ್ಯ ಬಯಲಾಗುತ್ತಿದ್ದಂತೆಯೇ ಕೋವಿಡ್‌ ವೇಳೆ ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಿದ್ದ ಪಿಎಂ ಕೇರ್ಸ್‌ ಫಂಡ್‌ ಬಗ್ಗೆ ಕಾಂಗ್ರೆಸ್‌ ಪ್ರಶ್ನೆಗಳನ್ನು ಎತ್ತಿದೆ.

ನವದೆಹಲಿ: ಚುನಾವಣಾ ಬಾಂಡ್‌ ರಹಸ್ಯ ಬಯಲಾಗುತ್ತಿದ್ದಂತೆಯೇ ಕೋವಿಡ್‌ ವೇಳೆ ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಿದ್ದ ಪಿಎಂ ಕೇರ್ಸ್‌ ಫಂಡ್‌ ಬಗ್ಗೆ ಕಾಂಗ್ರೆಸ್‌ ಪ್ರಶ್ನೆಗಳನ್ನು ಎತ್ತಿದೆ. 

ಈ ಫಂಡ್‌ ಅನ್ನು ಸ್ಥಾಪಿಸಿದ್ದು ಏಕೆ? ಇದಕ್ಕೆ ದೇಣಿಗೆದಾರರು ಯಾರು? ಈ ಫಂಡ್‌ ಎಲ್ಲಿ ಬಳಕೆ ಆಗಿದೆ ಎಂಬ ಇತ್ಯಾದಿ ಪ್ರಶ್ನೆಗಳನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕೇಳಿದ್ದಾರೆ ಹಾಗೂ ಫಂಡ್‌ನ ಪಾರದರ್ಶಕತೆಯನ್ನು ಪ್ರಶ್ನಿಸಿದ್ದಾರೆ.

ಅಲ್ಲದೆ ಎಲೆಕ್ಟೋರಲ್‌ ಬಾಂಡ್‌ ರೀತಿ ಇದೂ ಸಂಭಾವ್ಯ ಹಗರಣ ಆಗಬಹುದು ಎಂದು ಅವರು ಭವಿಷ್ ನುಡಿದಿದ್ದಾರೆ. ಸೋಮವಾರ ಟ್ವೀಟ್‌ ಮಾಡಿರುವ ರಮೇಶ್‌, ‘ಫಂಡ್‌ ದೇಣಿಗೆದಾರರ ಹೆಸರನ್ನು ಈವರೆಗೂ ಬಹಿರಂಗಪಡಿಸಿಲ್ಲ. 

ಮಾಧ್ಯಮ ವರದಿಗಳು ಹೇಳುವಂತೆ 12 ಸಾವಿರ ಕೋಟಿ ರು. ಫಂಡ್‌ ಇದಕ್ಕೆ ಹರಿದುಬಂದಿದೆಯಂತೆ. ದೊಡ್ಡ ಉದ್ದಿಮೆದಾರರೂ ಫಂಡ್‌ ನೀಡಿದ್ದಾರಂತೆ. 

ರಿಲಯನ್ಸ್‌ 500 ಕೋಟಿ ರು., ಅದಾನಿ 100 ಕೋಟಿ ರು., ಪೇಟಿಎಂ 500 ಕೋಟಿ ರು. ಹಾಗೂ ಜಿಂದಾಲ್‌ ಸ್ಟೀಲ್ಸ್‌ 100 ಕೋಟಿ ರು. ನೀಡುವುದಾಗಿ ಈ ಹಿಂದೆ ಹೇಳಿದ್ದವು’ ಎಂದಿದ್ದಾರೆ.

‘ಆದರೆ ಪಿಎಂ ಕೇರ್ಸ್‌ ಆರ್‌ಟಿಐ ಹಾಗೂ ಸಿಎಜಿ ವ್ಯಾಪ್ತಿಯಿಂದ ಹೊರಗಿದೆ. ಏಕೆಂದರೆ ಇದಕ್ಕೆ ಸರ್ಕಾರದ ಹಣ ಹರಿದುಬಂದಿಲ್ಲವಂತೆ. ಆದರೆ ಸರ್ಕಾರಿ ಸ್ವಾಮ್ಯದ 38 ಕಂಪನಿಗಳು ಇದಕ್ಕೆ ಹಣ ನೀಡಿವೆ. ಇದು ಅಂದಾಜಿ 2105 ಕೋಟಿ ರು. ಇದೆ. 

ಪಿಎಸ್‌ಯು ನೌಕರರು 150 ಕೋಟಿ ರು. ನೀಡಿದ್ದಾರೆ. ಚೀನಾದ ಟಿಕ್‌ಟಾಕ್‌ ಕೂಡ 30 ಕೋಟಿ. ಹುವೈ 7 ಕೋಟಿ, ಒನ್‌ಪ್ಲಸ್‌ 1 ಕೋಟಿ, ಶವೋಮಿ 10 ಕೋಟಿ ರು. ನೀಡಿವೆಯಂತೆ. ಆದರೆ ಒಟ್ಟು ಹಣ ಎಷ್ಟಿದೆ? ಎಷ್ಟು ಖರ್ಚಾಗಿದೆ ಎಂಬ ಯಾವ ಮಾಹಿತಿಯೂ ಇಲ್ಲ’ ಎಂದು ಕಿಡಿಕಾರಿದ್ದಾರೆ.