ಹಿಂದೂಗಳಲ್ಲಿ ಒಡಕು ಸೃಷ್ಟಿಗೆ ಖರ್ಗೆ ಯತ್ನ: ಮೋದಿ ಆಕ್ರೋಶ

| Published : May 03 2024, 01:11 AM IST / Updated: May 03 2024, 05:31 AM IST

ಹಿಂದೂಗಳಲ್ಲಿ ಒಡಕು ಸೃಷ್ಟಿಗೆ ಖರ್ಗೆ ಯತ್ನ: ಮೋದಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶ್ರೀರಾಮ ಮತ್ತು ಶಿವನ ಕುರಿತು ಇತ್ತೀಚೆಗೆ ಮಾಡಿದ ಹೇಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದ್ದು,   ಹಿಂದೂಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಸುರೇಂದ್ರ ನಗರ (ಗುಜರಾತ್): ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶ್ರೀರಾಮ ಮತ್ತು ಶಿವನ ಕುರಿತು ಇತ್ತೀಚೆಗೆ ಮಾಡಿದ ಹೇಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದ್ದು, ‘ವಿರೋಧ ಪಕ್ಷವು ತನ್ನ ತುಷ್ಟೀಕರಣ ರಾಜಕೀಯಕ್ಕಾಗಿ ಹಿಂದೂಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಛತ್ತೀಸಗಢದಲ್ಲಿ ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿ ಶಿವಕುಮಾರ ದಹಾರಿಯಾ ಪರ ಪ್ರಚಾರ ಮಾಡಿದ್ದ ಖರ್ಗೆ, ‘ನಮ್ಮ ಅಭ್ಯರ್ಥಿಯ ಹೆಸರು ಶಿವಕುಮಾರ. ಅವರು ಒಬ್ಬ ಶಿವ. ಹೀಗಾಗಿ ರಾಮನ ವಿರುದ್ಧ ಸ್ಪರ್ಧಿಸಲು ಅವರು ಅರ್ಹ. ನಾನು ಕೂಡ ಮಲ್ಲಿಕಾರ್ಜುನ. ಶಿವನ ಇನ್ನೊಂದು ಹೆಸರೇ ಮಲ್ಲಿಕಾರ್ಜುನ’ ಎಂದಿದ್ದರು.

ಇದಕ್ಕೆ ಸುರೇಂದ್ರ ನಗರ ಬಿಜೆಪಿ ರ್‍ಯಾಲಿಯಲ್ಲಿ ಕಿಡಿಕಾರಿದ ಮೋದಿ, ‘ಈಗ ಕಾಂಗ್ರೆಸ್ ಹಿಂದೂಗಳ ನಡುವೆ ಒಡಕು ಮೂಡಿಸಲು ಯತ್ನಿಸುತ್ತಿದೆ. ಖರ್ಗೆ ಶ್ರೀರಾಮ ಮತ್ತು ಶಿವನ ಬಗ್ಗೆ ಅತ್ಯಂತ ಅಪಾಯಕಾರಿ ಹೇಳಿಕೆ ನೀಡಿದ್ದಾರೆ. ದುರುದ್ದೇಶದಿಂದ ಈ ಹೇಳಿಕೆ ನೀಡಲಾಗಿದೆ. ಅವರು ಹಿಂದೂ ಸಮುದಾಯವನ್ನು ಒಡೆಯುವ ನಾಟಕವಾಡುತ್ತಿದ್ದಾರೆ. ರಾಮ ಮತ್ತು ಶಿವನ ಭಕ್ತರ ನಡುವೆ ಒಡಕು ಸೃಷ್ಟಿಸಲು ಖರ್ಗೆ ಯತ್ನಿಸುತ್ತಿದ್ದಾರೆ’ ಎಂದರು.

‘ಮೊಘಲರೂ ಸಹ ನಮ್ಮ ಸಾವಿರಾರು ವರ್ಷಗಳ ಸಂಪ್ರದಾಯಗಳನ್ನು ಮುರಿಯಲು ಸಾಧ್ಯವಾಗಲಿಲ್ಲ. ಈಗ ಕಾಂಗ್ರೆಸ್ ಅದನ್ನು ಮುರಿಯಲು ಬಯಸುತ್ತಿದೆಯೇ? ಕಾಂಗ್ರೆಸ್ ತುಷ್ಟೀಕರಣಕ್ಕೆ ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ?’ ಎಂದು ಮೋದಿ ಪ್ರಶ್ನಿಸಿದರು.