ಆರ್‌ಆರ್‌ಆರ್‌ ಹೆಮ್ಮೆ, ಆರ್‌ಆರ್‌ ನಾಚಿಕೆಗೇಡು: ಮೋದಿ

| Published : May 01 2024, 01:21 AM IST

ಸಾರಾಂಶ

ಕಾಂಗ್ರೆಸ್‌ ವಿರುದ್ಧ ದಿನಕ್ಕೊಂದು ಹೊಸ ಆರೋಪ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶಕ್ಕೆ ತೆಲುಗಿನ ಆರ್‌ಆರ್‌ಆರ್‌ ಸಿನಿಮಾ ಹೆಮ್ಮೆ ತಂದರೆ, ಕಾಂಗ್ರೆಸ್‌ ಪಕ್ಷವು ತೆಲಂಗಾಣದಲ್ಲಿ ‘ಆರ್‌ಆರ್‌ ತೆರಿಗೆ’ ವಸೂಲಿ ಮೂಲಕ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹೈದರಾಬಾದ್‌: ಕಾಂಗ್ರೆಸ್‌ ವಿರುದ್ಧ ದಿನಕ್ಕೊಂದು ಹೊಸ ಆರೋಪ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶಕ್ಕೆ ತೆಲುಗಿನ ಆರ್‌ಆರ್‌ಆರ್‌ ಸಿನಿಮಾ ಹೆಮ್ಮೆ ತಂದರೆ, ಕಾಂಗ್ರೆಸ್‌ ಪಕ್ಷವು ತೆಲಂಗಾಣದಲ್ಲಿ ‘ಆರ್‌ಆರ್‌ ತೆರಿಗೆ’ ವಸೂಲಿ ಮೂಲಕ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ರಾಜ್ಯದಲ್ಲಿ ವಸೂಲಿ ದಂಧೆ ಆರಂಭಿಸಿದ್ದಾರೆ ಎಂಬ ಪರೋಕ್ಷ ಆರೋಪ ಹೊರಿಸಿದ್ದಾರೆ,ಸೋಮವಾರ ಮೇದಕ್‌ ಜಿಲ್ಲೆಯ ಜಹೀರಾಬಾದ್‌ನಲ್ಲಿ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ತೆಲುಗು ಚಿತ್ರರಂಗವು ‘ಆರ್‌ಆರ್‌ಆರ್’ ನೀಡಿತು, ಇದು ಭಾರತಕ್ಕೆ ಹೆಮ್ಮೆ ತಂದಿತು. ಆದರೆ, ತೆಲಂಗಾಣ ಕಾಂಗ್ರೆಸ್ ಕೇವಲ ಆರ್‌ಆರ್ (ಆರ್‌ಆರ್ ಅಂದರೆ ರೇವಂತ ರೆಡ್ಡಿ) ತೆರಿಗೆ ರೂಪದಲ್ಲಿ ಕೊಡುಗೆ ನೀಡಿದ್ದು ನಾಚಿಕೆ ತಂದಿದೆ. ತೆಲಂಗಾಣದ ಉದ್ಯಮಿಗಳು, ವರ್ತಕರು ಮತ್ತು ಗುತ್ತಿಗೆದಾರರಿಗೆ ಹಿಂಬಾಗಿಲಿನಿಂದ ಆರ್‌ಆರ್‌ ತೆರಿಗೆ ಪಾವತಿಸಲು ಬಲವಂತ ಮಾಡಲಾಗುತ್ತಿದೆ. ಈ ಆರ್‌ಆರ್‌ ತೆರಿಗೆ ವಸೂಲಿಯಿಂದ ಬಂದ ಪ್ರಮುಖ ಭಾಗವನ್ನು ಕಪ್ಪು ಹಣದ ರೂಪದಲ್ಲಿ ದೆಹಲಿಗೆ ಕಳುಹಿಸಲಾಗಿದೆ’ ಎಂದು ಆರೋಪಿಸಿದರು.‘ಆರ್ ಆರ್ ತೆರಿಗೆ ನಿಲ್ಲಿಸದಿದ್ದರೆ ವಿನಾಶದತ್ತ ಸಾಗಲಿದೆ. ಏಕೆಂದರೆ ಈ ಹಿಂದೆ ಬಿಆರ್‌ಎಸ್‌ ಸರ್ಕಾರ ರಾಜ್ಯವನ್ನು ಸರ್ವನಾಶ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರವೂ ಅದನ್ನೇ ಮಾಡುತ್ತಿದೆ. ಬಿಆರ್‌ಎಸ್‌ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳು ಒಂದೇ ಗೂಡಿನ ಹಕ್ಕಿಗಳು. ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ಪಕ್ಷದ ನಾಯಕರ ಜೊತೆಗೆ ಕಾಂಗ್ರೆಸ್ ನಾಯಕರೂ ಭಾಗಿಯಾಗಿದ್ದಾರೆ’ ಎಂದು ಮೋದಿ ಆರೋಪಿಸಿದರು.ಶೇ.55 ದರೋಡೆಗೆ ಕಾಂಗ್ರೆಸ್‌ ಸಿದ್ಧ:ಮತ್ತೊಂದೆಡೆ, ಮತ್ತೊಂದು ದರೋಡೆಗೆ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಆರೋಪಿಸಿದ ಮೋದಿ, ‘ಜನರಿಂದ ಪಿತ್ರಾರ್ಜಿತ ತೆರಿಗೆ ಸಂಗ್ರಹಿಸಲು ಕಾಂಗ್ರೆಸ್‌ ಸಿದ್ಧವಾಗಿದೆ. ಅಧಿಕಾರಕ್ಕೆ ಬಂದರೆ ಅಮೆರಿಕ ಮದರಿಯಲ್ಲಿ ಪಿತ್ರಾರ್ಜಿತ ಆಸ್ತಿ ಕಾಯ್ದೆ ಹೇರಿ, ಕುಟುಂಬಗಳು ಗಳಿಸಿದ ಶೇ.55ರಷ್ಟು ಸಂಪತ್ತನ್ನು ದೋಚಲು ಹೊಂಚು ಹಾಕಿದೆ’ ಎಂದು ಕಿಡಿಕಾರಿದರು.